ಬೆಂಗಳೂರು: ವ್ಯಾಕ್ಸಿನೇಟ್ ಇಂಡಿಯಾ(Vaccinate India) ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಇಂದು ಚಾಲನೆ ನೀಡಿದ್ದಾರೆ. ಬೆಂಗಳೂರಿನ ರಾಜಭವನದಲ್ಲಿ ಗಿವ್ ಇಂಡಿಯಾ(Give India) ಸಂಸ್ಥೆಯಿಂದ ಆಯೋಜನೆಯಾಗಿರುವ ವ್ಯಾಕ್ಸಿನೇಟ್ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಚಾಲನೆ ನೀಡಿದರು.
ಈ ವೇಳೆ ಸಾಂಕೇತಿಕವಾಗಿ ಇಬ್ಬರು ಮಹಿಳೆಯರಿಗೆ ವ್ಯಾಕ್ಸಿನ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮೈಮರೆಯಬೇಡಿ, 6 ಅಡಿ ಅಂತರ ಇರಲಿ. ಮಾಸ್ಕ್ ಸದಾ ಹಾಕಿಕೊಳ್ಳಿ, ಕೈ ತೊಳೆಯುತ್ತಿರಿ. ವ್ಯಾಕ್ಸಿನ್ ಹಾಕಿಸಿಕೊಳ್ಳಿ, ಇದು ಕಡ್ಡಾಯ ವ್ಯಾಕ್ಸಿನ್ಗೆ ಪರ್ಯಾಯ ಯಾವುದೂ ಇಲ್ಲ. ಜಂಕ್ ಫುಡ್ ಸೇವಿಸಬೇಡಿ. ನಮ್ಮ ಸಾಂಪ್ರದಾಯಕ ಭಾರತೀಯ ಆಹಾರ ಸೇವಿಸಿ ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಬಡವರು, ಕೆಳ ವರ್ಗದವರಿಗೆ ವ್ಯಾಕ್ಸಿನ್ ನೀಡಬೇಕಾಗಿದೆ. ಆಗ ಕೊರೊನಾ ವಿರುದ್ಧ ಹೋರಾಡಲು ಶಕ್ತಿ ಸಿಗುತ್ತದೆ. ಖಾಸಗಿ ಸಂಸ್ಥೆಗಳು ಸಿಎಸ್ಆರ್(CSR) ನಿಧಿ ಬಳಕೆ ಮಾಡಬೇಕು. ವ್ಯಾಕ್ಸಿನ್ ಕಾರ್ಯಕ್ಕೆ ಸಿಎಸ್ಆರ್ ನಿಧಿ ಬಳಕೆಯಾಗಬೇಕು ಎಂದರು. ಸೆಪ್ಟೆಂಬರ್ ಮಾಹೆಯಿಂದ ಪ್ರತಿ ದಿನ 5 ಲಕ್ಷ ಜನರಿಗೆ ಲಸಿಕೆ ನೀಡುವ ಉದ್ದೇಶವಿದ್ದು, ಪ್ರಸ್ತುತ 3.5 ರಿಂದ 4 ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ 1.5 ಕೋಟಿ ಲಸಿಕೆ ಪೂರೈಕೆಯಾಗುವ ನಿರೀಕ್ಷೆ ಇದೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಸಚಿವ ಡಾ. ಕೆ.ಸುಧಾಕರ್, ಮುನಿರತ್ನ, ಸಂಸದ ಪಿ.ಸಿ ಮೋಹನ್ ಭಾಗಿಯಾಗಿದ್ದರು.
ಇದನ್ನೂ ಓದಿ: ಅಂತಾರಾಜ್ಯ ಜಲ ವಿವಾದ ಕುರಿತು ದೆಹಲಿಯಲ್ಲಿ ಕಾನೂನು ತಜ್ಞರೊಂದಿಗೆ ಸಭೆ: ಸಿಎಂ ಬೊಮ್ಮಾಯಿ