ಬೆಂಗಳೂರು : ಸದನದಲ್ಲಿ ಬಹುಮತ ಸಾಬೀತುಪಡಿಸಿದ್ದು, ಶೀಘ್ರದಲ್ಲೇ ಕೇಂದ್ರ ನಾಯಕರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕಲಾಪ ಮುಂದೂಡಿದ ಬಳಿಕ ಮಾತನಾಡಿದ ಅವರು, ಧನ ವಿಧೇಯಕ ಮಸೂದೆಗೆ ವಿಧಾನಸಭೆಯಲ್ಲಿಅಂಗೀಕಾರ ದೊರೆತಿದ್ದು, ಮೇಲ್ಮನೆಯಲ್ಲಿ ಅನುಮತಿ ಸಿಕ್ಕ ನಂತರ ಇಂದೇ ವಿಧೇಯಕಕ್ಕೆ ಜಾರಿಯಾಗುವಂತೆ ನೋಡಿಕೊಳ್ಳುತ್ತೇವೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಸದನದಲ್ಲಿಂದು ಬಹುಮತ ಸಾಬೀತು ಪಡಿಸಿದ್ದು, ಮುಂದಿನ ದಿನಗಳಲ್ಲಿ ಸ್ಥಿರ ಸರ್ಕಾರ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಕೇಂದ್ರ ಬಿಜೆಪಿ ಹಿರಿಯ ನಾಯಕರೊಂದಿಗೆ ಯಡಿಯೂರಪ್ಪ, ಚರ್ಚೆ ನಡೆಸಿ ಯಾರಿಗೆಲ್ಲ ಸಚಿವ ಸ್ಥಾನ ನೀಡಬೇಕೆಂದು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ. ರಮೇಶ್ ಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಪೀಕರ್ ಸ್ಥಾನಕ್ಕೆ ಇಂದು ಸಂಜೆ ನಮ್ಮ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದರು.
ಸ್ಪೀಕರ್ ರೇಸ್ನಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ನಗುತ್ತಲೇ ಎಲ್ಲವನ್ನು ಹಿರಿಯ ಬಿಜೆಪಿ ನಾಯಕರು ನಿರ್ಧರಿಸಲಿದ್ದಾರೆ ಎಂದು ಪರೋಕ್ಷವಾಗಿ ಸ್ಪೀಕರ್ ರೇಸ್ನಲ್ಲಿ ತಾವು ಸಹ ಆಕಾಂಕ್ಷಿ ಎಂದು ಸೂಚನೆ ನೀಡಿದರು.