ಬೆಂಗಳೂರು: ಸಂಘಟನೆ ವಿಚಾರವಾಗಿ ಹಾಗೂ ಬಿಬಿಎಂಪಿ ಚುನಾವಣೆ ವಿಚಾರವಾಗಿ ಚರ್ಚೆ ನಡೆಸಿದ್ದೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಕುಮಾರಕೃಪ ಅತಿಥಿ ಗೃಹದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಭೇಟಿ ನಂತರ ಮಾತನಾಡಿದ ಅವರು, ಪಕ್ಷ ಸಂಘಟನೆಗೆ ಮಹತ್ವದ ಚರ್ಚೆ ನಡೆಯುತ್ತಿದೆ. ಕಳೆದ ಎರಡು ದಿನಗಳಿಂದ ಮುಖಂಡರ ಮಾಹಿತಿಯನ್ನು ಸುರ್ಜೇವಾಲಾ ಪಡೆದಿದ್ದಾರೆ. ನಾವು ಸಹ ಪಕ್ಷದ ಭಾಗವಾಗಿ ಆಗಮಿಸಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ ಎಂದರು.
ಅಹಿಂದ ಹೋರಾಟ ವಿಚಾರವಾಗಿ ಮಾತನಾಡಿ, ನಾವು ಸಂಘಟನೆಯಲ್ಲಿದ್ದೇವೆ. ನಾವು ಏನೇ ಮಾಡಿದರೂ ಪಕ್ಷದ ವೇದಿಕೆಯಲ್ಲೇ ಮಾಡಬೇಕು. ಪ್ರತ್ಯೇಕವಾಗಿ ಹೋರಾಟ ಮಾಡುವುದು ಸರಿ ಅಲ್ಲ ಎಂದರು. ನಾವು ವರ್ಗಕ್ಕೆ ಮಹತ್ವ ಕೊಡಬೇಕು, ಜಾತಿಗೆ ಮಹತ್ವ ಕೊಟ್ಟರೆ ಹಿಂದುಳಿದ ಜಾತಿಗಳು ವಿಘಟನೆ ಆಗುತ್ತವೆ. ನಾನಿದ್ದಾಗಲೇ ಹಿಂದುಳಿದ ವರ್ಗಗಳ ಆಯೋಗ ಮಾಡಿದ್ದೇನೆ. ಪ್ರತಿ ಐದು ವರ್ಷಕ್ಕೊಮ್ಮೆ ಇದರ ಪರಶೀಲನೆ ಆಗಲಿ. ಪಕ್ಷದಲ್ಲೇ ಹಿಂದುವಳಿ ವರ್ಗಗಳ ವಿಭಾಗ ಇದೆ. ಪಕ್ಷದವರೇ ಸಮಾವೇಶ ಮಾಡಿದರೆ ಒಳಿತು ಎಂದರು.
ನಮ್ಮ ಮುಖಂಡರು ಜಾತಿ ಸಮಾವೇಶದಲ್ಲಿ ಭಾಗಿಯಾದರೆ ತಪ್ಪೇನಿಲ್ಲ. ಆದರೆ ಹೋರಾಟ ಮಾಡುವುದಿದ್ದರೆ ಪಕ್ಷದಿಂದಲೇ ಮಾಡಲಿ. ಪಕ್ಷಗಳು ಜಾತಿ ಸಮಾವೇಶಗಳನ್ನು ಮಾಡೋದು ತಪ್ಪಾಗುತ್ತದೆ. ವರ್ಗವಾರು ಸಮಾವೇಶಗಳನ್ನು ಮಾಡಬೇಕು. ಅಹಿಂದ, ಹಿಂದುಳಿದ ದಲಿತ ಸಂಘಟನೆ ಮಾಡಲು ಪಕ್ಷದಲ್ಲಿ ಆಯಾ ಘಟಕಗಳಿವೆ. ಪಕ್ಷದಲ್ಲಿರುವ ಸೆಲ್ಗಳ ಮುಖಾಂತರ ಸಮಾವೇಶ ಸಂಘಟನೆ ಮಾಡುವುದರಲ್ಲಿ ತಪ್ಪಿಲ್ಲ ಎಂದರು.
ಈ ಸುದ್ದಿಯನ್ನೂ ಓದಿ: 4 ಟ್ಯಾಂಕರ್ ಲಾರಿಗಳಲ್ಲಿ ಮದ್ಯ ಸಾಗಣೆ: ಆರೋಪಿಗಳು ಅರೆಸ್ಟ್
ಅಹಿಂದ ಸಂಘಟನೆಯಾಗಬಾರದು ಎಂದು ನಾನು ಹೇಳಲ್ಲ. ಆದರೆ ಯಾವುದೇ ಸಂಘಟನೆಗಳಾದರೂ ಕೂಡ ಪಕ್ಷದ ಚೌಕಟ್ಟಿನಲ್ಲೇ ಆಗೋದು ಒಳಿತು. ಈ ಹಿಂದಿನಿಂದಲು ದಲಿತ ಹಾಗೂ ಹಿಂದುಳಿದ ವರ್ಗಗಳನ್ನು ಮೇಲೆತ್ತಲು ಕಾಂಗ್ರೆಸ್ ಸಾಕಷ್ಟು ಯೋಜನೆಗಳನ್ನು ಕೊಟ್ಟಿದೆ. ಅವುಗಳ ಪ್ರಗತಿ ಪರಶೀಲನೆ ಅಗತ್ಯ ಎಂದು ಹೇಳಿದರು.