ಬೆಂಗಳೂರು : ಮಕ್ಕಳು, ಪೋಷಕರು, ಶಿಕ್ಷಕರು, ಸಿಬ್ಬಂದಿ ಸೇರಿದಂತೆ 20 ಲಕ್ಷಕ್ಕೂ ಅಧಿಕ ಜನರು ಪರೀಕ್ಷಾ ಅವಧಿಯಲ್ಲಿ ಸೇರುತ್ತಾರೆ. ಲಸಿಕೆ ಕೊರತೆಯಿಂದ ಬಹಳ ತೊಂದರೆಯಾಗುತ್ತದೆ. ಯಾವುದೇ ಕಾರಣಕ್ಕೂ SSLC ಪರೀಕ್ಷೆಯನ್ನು ಮಾಡದೇ ಪಾಸ್ ಮಾಡಿ.
ಪರೀಕ್ಷೆಗೆ ಹಾಜರಾದವರನ್ನು ತೇರ್ಗಡೆ ಮಾಡಲಾಗುವುದೆಂದು ಈಗಾಗಲೇ ಈ ಬಗ್ಗೆ ನೀವೇ ಹೇಳಿದ್ದೀರಿ. ಆದರೆ, ಈ ಇಬ್ಬಗೆಯ ನೀತಿ ಯಾಕೆ? ಪರೀಕ್ಷೆಗೆ ಬಂದವರನ್ನು ಪಾಸ್ ಮಾಡಿದ ಮೇಲೆ ಈ ಪರೀಕ್ಷೆ ಏಕೆ ಬೇಕು? ಖಂಡಿತ ಬೇಡ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಒತ್ತಾಯ ಮಾಡಿದರು.
ಇದನ್ನೂ ಓದಿ: ಈ ವರ್ಷದಿಂದಲೇ ಶಿಕ್ಷಣ ನೀತಿ ಜಾರಿ: SSLC ಪರೀಕ್ಷೆ ನಿರ್ಧಾರಕ್ಕೆ ಸಮ್ಮತಿ ಎಂದ DCM ಅಶ್ವತ್ಥ ನಾರಾಯಣ
ಈಟಿವಿ ಭಾರತದ ಜೊತೆ ಮಾತನಾಡಿದ ಅವರು, SSLC ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಿ. ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ ಮೇಲೆ SSLC ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯ ಎಂದರು. ವಿದ್ಯಾರ್ಥಿಗಳ ಆರೋಗ್ಯ ಹಾಗೂ ಪ್ರಾಣ ಮುಖ್ಯವೆಂದು ಪಿಯುಸಿ ವಿದ್ಯಾಥಿಗಳನ್ನು ಪಾಸ್ ಮಾಡಲಾಗಿದೆ.
ಈ ಕಾರಣ ಇರುವುದರಿಂದ SSLC ವಿದ್ಯಾರ್ಥಿಗಳನ್ನು ಕೂಡ ಪಾಸ್ ಮಾಡಿ ಅನುಕೂಲ ಮಾಡಿಕೊಡಬೇಕು. ಬರೀ ಹಠಕ್ಕೆ ಬೀಳಬೇಡಿ. ಹಠದಿಂದ ಒಳ್ಳೆಯದಲ್ಲ, ಮಕ್ಕಳಿಗೆ ಲಸಿಕೆ ಹಾಕಲು ಇನ್ನೂ ಆಗಿಲ್ಲ ಎಂದರು. ಸಂಪೂರ್ಣವಾಗಿ ಎಲ್ಲ SSLC ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು.
ಈ ಹಿನ್ನೆಲೆಯಲ್ಲಿ ಸರ್ಕಾರದ ಧೊರಣೆ ಖಂಡಿಸಿ ಜುಲೈ 19ರಂದು ಕನ್ನಡ ಚಳವಳಿ ವಾಟಾಳ್ ಪಕ್ಷವು ಶಾಲೆಗಳನ್ನು ಬಂದ್ ಮಾಡಿ ಚಳವಳಿ ಕೈಗೊಳ್ಳಲು ತೀರ್ಮಾನಿಸಿದೆ. ಸರ್ಕಾರಕ್ಕೆ ಈ ಮೂಲಕ ಎಚ್ಚರಿಕೆ ಕೂಡ ಕೊಡುತ್ತೇನೆ ಎಂದರು.
ಶುಲ್ಕ ವಿಚಾರವಾಗಿ ವಾಟಾಳ್ ಮಾತು: ಶುಲ್ಕ ವಿಚಾರ ನ್ಯಾಯಾಲಯದಲ್ಲಿ ಇತ್ಯರ್ಥ ಆಗುತ್ತದೆ. ಆದರೂ ಖಾಸಗಿ ಶಿಕ್ಷಣ ಸಂಸ್ಥೆಗಳ ಧೋರಣೆ ಸರಿಯಲ್ಲ. ಸಂಸ್ಥೆಗಳನ್ನು ನಡೆಸುತ್ತಿರುವವರು ರಾಜಕಾರಣಿಗಳು ಹಾಗೂ ಮಠಾಧೀಶರು. ಏನೇ ಇದ್ದರೂ ಧೋರಣೆ ಸರಿಯಲ್ಲ. ವಂತಿಕೆ ಪೋಷಕರಿಗೆ ಬೆನ್ನು ಮೂಳೆ ಮುರಿಯುವಷ್ಟಾಗಿದೆ ಎಂದು ಹೇಳಿದರು.
ಶಾಲಾ ಶುಲ್ಕವನ್ನು ಹದ್ದುಬಸ್ತಿನಲ್ಲಿಡಲು ಸರ್ಕಾರದ ಕೈಯಲ್ಲಿ ಆಗುತ್ತಿಲ್ಲ. ಸರ್ಕಾರದ ಜೊತೆಯಲ್ಲಿರುವವರೇ ಪ್ರಭಾವಿಗಳು. ಸಾರ್ವಜನಿಕರು ಈ ವಿಚಾರವಾಗಿ ದಂಗೆ ಏಳಬೇಕಾಗುತ್ತೆ ಎಂದು ಎಚ್ಚರಿಸಿದರು.