ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಉಲ್ಬಣಗೊಂಡ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಈ ನಡುವೆ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟಿಸಿದರು.
ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿವಾಸದ ಮುಂದೆ ಮುಷ್ಕರ ನಡೆಸಿದ ಅವರು, ಪಿಯುಸಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪಾಸ್ ಮಾಡಿದ್ದೀರಿ. ಎಸ್ಎಸ್ಎಲ್ಸಿ ಮಕ್ಕಳಿಗೆ ಬೇರೇ ಆರೋಗ್ಯ ಇದೆಯೇ? ಎಸ್ಎಸ್ಎಲ್ಸಿ ಹಾಗು ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಸಹ ಪಾಸ್ ಮಾಡಿ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಹಾಗು ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನ ಪರೀಕ್ಷೆಗಳಿಲ್ಲದೆ ಪಾಸ್ ಮಾಡಬೇಕೆಂದು ಆಗ್ರಹಿಸಿದರು.
ನನ್ನೊಬ್ಬನಿಗೆ ಎಷ್ಟು ಮಂದಿ ಪೊಲೀಸರಾ?:
ಇನ್ನು ಸಚಿವರ ಮನೆ ಮುಂದೆ ಪ್ರತಿಭಟಿಸಲು ಹೋಗಿದ್ದ ವಾಟಾಳ್ ನಾಗರಾಜ್ ಅವರಿಗೆ ಶಾಕ್ ಆಯ್ತು. ಕಾರಣ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಅವರು ಒಬ್ಬರೇ, ಆದರೆ ಅವರಿಗಾಗಿ ಬಂದಿದ್ದು ಒಂದ್ ಇಡೀ ಪೊಲೀಸ್ ತಂಡ. ಇದನ್ನ ಕಂಡ ವಾಟಾಳ್ ನಗುತ್ತಲೇ, "ನನ್ನೊಬ್ಬನಿಗಾಗಿ ಇಷ್ಟು ಮಂದಿ ಪೊಲೀಸರು ಬರುವ ಅವಶ್ಯಕತೆ ಇಲ್ಲ, ಇದೇನು ಹುಡುಕಾಟವೇ ಅಂತ ಕಾಲೆಳೆದರು. ನಾನು ಸಚಿವರ ಮನೆ ಮುಂದೆ ಚಳುವಳಿ ಮಾಡ್ತಿನಿ ಅಷ್ಟೇ ಮನೆಯೊಳಗೆ ಹೋಗಲ್ಲ. ಇಷ್ಟೊಂದು ಮಂದಿ ಬಂದ್ದೀರಿ ನೋಡಿ ಖುಷಿ ಆಯ್ತು ಬಿಡಿ" ಅಂತ ಅಂದರು.