ಬೆಂಗಳೂರು : ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಟೌನ್ ಹಾಲ್ ಬಳಿ ಮುಷ್ಕರ ನಡೆಸಲಾಯಿತು. ಇದಕ್ಕೂ ಮೊದಲು, ಕಾರ್ಪೊರೇಷನ್ ಬಳಿ ವಾಟಾಳ್ ದಿಢೀರ್ ಪ್ರತಿಭಟನೆ ಹಿನ್ನೆಲೆ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು. ರಸ್ತೆ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆ ವಾಹನ ಸವಾರರು ಹೈರಾಣಾದರು.
ಬಳಿಕ ಮಾತಾನಾಡಿದ ವಾಟಾಳ್ ನಾಗರಾಜ್, ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಡಿಯೂರಪ್ಪ ಒಬ್ಬ ಹಿಟ್ಲರ್ ಎಂದು ಕಿಡಿಕಾಡಿದರು. ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸ್ ಆಯುಕ್ತ ಕಮಲ್ ಪಂಥ್ ಬಗ್ಗೆಯೂ ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.
ದೇಶಕ್ಕೆ ಯಡಿಯೂರಪ್ಪ ನಾಲಾಯಕ್, ನನಗೆ ಕೊಟ್ಟಿರುವ ಎಸ್ಕಾರ್ಟ್ನ್ನು ಅವರು ಹಿಂಪಡೆದಿದ್ದಾರೆ. ಯಡಿಯೂರಪ್ಪನವರೇ ಇದರಿಂದ ನಾನು ಹೆದರುವುದಿಲ್ಲ. ಪೊಲೀಸರು ಅಧಿಕಾರ ಬಳಸಿ ಕನ್ನಡ ಹೋರಾಟಗಾರರ ಬಂಧಿಸಿದ್ದಾರೆ.
ಗುರುವಾರ ಬೆಳಗ್ಗೆ ಖಾಸಗಿ ಹೋಟೆಲ್‌ನಲ್ಲಿ ಸಭೆ ಕರೆದಿದ್ದೇನೆ. ಇದರ ಬಗ್ಗೆ ವಿಪಕ್ಷ ಬಾಯಿ ಮುಚ್ಚಿಕೊಂಡು ಕೂರುವುದು ಸರಿಯಲ್ಲ. ಸಿದ್ಧರಾಮಯ್ಯ, ಡಿ ಕೆ ಶಿವಕುಮಾರ್ ಇದನ್ನ ಖಂಡಿಸಬೇಕಿತ್ತು. ಆದರೆ, ಬಾಯಿ ಮುಚ್ಚಿ ಕುಳಿತಿದ್ದಾರೆ. ಯಡಿಯೂರಪ್ಪ ಅವರನ್ನ ರಾಜ್ಯವೇ ವಿರೋಧಿಸಬೇಕು ಎಂದು ತಿಳಿಸಿದರು.
ಹೋರಾಟ ಮಾಡಿ ಜೈಲಿಗೆ ಹೋಗುತ್ತೇವೆ, ನಿಮ್ಮಂತೆ ಅಲ್ಲ: ಸಿಎಂ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ
ಬಳಿಕ ಮಾತಾನಾಡಿದ ಸಾ ರಾ ಗೋವಿಂದ್ ಅವರು, ಬಂದ್ ಕರೆ ಕೊಟ್ಟಿದ್ದೇವೆ. ಬಂದ್ ವಿಫಲ ಆಗಿದ್ರೆ ಸರ್ಕಾರ ಹೊಣೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ವಾಪಸ್ ಪಡೆಯುವ ಬಗ್ಗೆ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು. ಕಾರ್ಪೊರೇಷನ್ನಿಂದ ಟೌನ್ ಹಾಲ್ ಮುಂಭಾಗ ರ್ಯಾಲಿ ನಡೆಸುತ್ತಿದ್ದ ವೇಳೆ ಪೊಲೀಸರು ವಾಟಾಳ್ ನಾಗಾರಾಜ್ ಸೇರಿದಂತೆ ಇತರೆ ನಾಯಕರನ್ನು ಬಂಧಿಸಿದ್ದಾರೆ.