ಬೆಂಗಳೂರು: ಹುಲಿ ಉಗುರಿನ ಡಾಲರ್ ಧರಿಸಿದ್ದ ಆರೋಪದಡಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ವರ್ತೂರು ಸಂತೋಷ್ಗೆ 14 ದಿನ (ನ.6 ವರೆಗೆ) ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕನ್ನಡ ಕಿರುತೆರೆಯ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಫರ್ಧಿಯಾಗಿದ್ದ ಇವರನ್ನು ಅರಣ್ಯಾಧಿಕಾರಿಗಳು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ವ್ಯಕ್ತಿಯೊಬ್ಬರು ದೂರು ನೀಡಿದ ಆಧಾರದ ಮೇರೆಗೆ ರಾಜರಾಜೇಶ್ವರಿ ನಗರದ ಬಳಿ ರಿಯಾಲಿಟಿ ಶೋ ನಡೆಯುತ್ತಿದ್ದ ಬಿಗ್‌ಬಾಸ್ ಮನೆಗೆ ಭಾನುವಾರ ರಾತ್ರಿ ತೆರಳಿದ್ದ ಅರಣ್ಯಾಧಿಕಾರಿಗಳು ಸಂತೋಷ್ ಅವರನ್ನು ವಶಕ್ಕೆ ಪಡೆದಿದ್ದರು.
ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹುಲಿ ಉಗುರಿನ ಡಾಲರ್ ಮೂಲದ ಕುರಿತು ಅಧಿಕಾರಿಗಳು ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಸಂತೋಷ್ ಅವರನ್ನು ಹಾಜರುಪಡಿಸಿದ್ದಾರೆ.
ಸಂತೋಷ್ ಪರ ವಕೀಲ ನಟರಾಜ್ ಪ್ರತಿಕ್ರಿಯಿಸಿ, "ಪ್ರಕರಣ ಸಂಬಂಧ ಜಾಮೀನು ಅರ್ಜಿ ಹಾಕಿದ್ದು, ಬುಧವಾರ ವಿಚಾರಣೆ ಇದೆ. ಜಾಮೀನು ಅರ್ಜಿಗೆ ನ್ಯಾಯಾಲಯ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ತನಿಖಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಂತರ ಅದನ್ನು ಪರಿಶೀಲನೆ ನಡೆಸಿ ಬಂಧಿಸಿದ್ದಾರೆ. ಈಗ ಹುಲಿಯ ಉಗುರು ಎಂದು ಹೇಳುತ್ತಿದ್ದಾರೆ. ತಜ್ಞರ ಪರಿಶೀಲನಾ ವರದಿ ಬಂದ ಬಳಿಕ ಗೊತ್ತಾಗಲಿದೆ" ಎಂದರು.
ಪರಪ್ಪನ ಅಗ್ರಹಾರದ ಕ್ವಾರಂಟೈನ್ ಜೈಲಿಗೆ ಶಿಫ್ಟ್ ಆಗಿರುವ ಸಂತೋಷ್ಗೆ ನಾಳೆ ಕೈದಿ ನಂಬರ್ ನೀಡಲಿದ್ದಾರೆ.
ವರ್ತೂರು ಸಂತೋಷ್ ಯಾರು?: ವರ್ತೂರಿನಲ್ಲಿ ವ್ಯವಸಾಯ ಮಾಡಿಕೊಂಡಿರುವ ಸಂತೋಷ್, ‘ರೈತ ಅಂದರೆ ಸಗಣಿಯನ್ನೇ ಎತ್ತಬೇಕು ಎಂದೇನಿಲ್ಲ, ಶೋಕಿನೂ ಮಾಡಬಹುದು’ ಎಂದು ಹೇಳುತ್ತಿದ್ದರು. ಹಳ್ಳಿಕಾರ್ ತಳಿಯ ಎತ್ತುಗಳನ್ನು ಬೆಳೆಸುತ್ತಿದ್ದರು. ಎತ್ತುಗಳ ಓಟದ ಸ್ಪರ್ಧೆಯಲ್ಲಿಯೂ ಇವರು ಹೆಸರು ಮಾಡಿದ್ದರು. ಸದ್ಯ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.
ಬಿಗ್‌ಬಾಸ್ ಸೀಸನ್ 10 ಕನ್ನಡ ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಅಕ್ಟೋಬರ್ 8 ರಿಂದ ಪ್ರಾರಂಭವಾದ ಶೋ, ಇಂದಿನಿಂದ ಮೂರನೇ ವಾರಕ್ಕೆ ಕಾಲಿಟ್ಟಿದೆ. ತಮ್ಮ ತಮ್ಮ ಮೆಚ್ಚಿನ ಸ್ಪರ್ಧಿಗಳ ಪರ ಬಿಗ್‌ಬಾಸ್ ಅಭಿಮಾನಿಗಳು ಬ್ಯಾಟಿಂಗ್ ಮಾಡುತ್ತಿದ್ದಾರೆ. ಸ್ಪರ್ಧಿಗಳ ವೀಕ್ನೆಸ್-ಸ್ಟ್ರೆಂತ್ ಬಗ್ಗೆ ಆನ್ಲೈನ್ನಲ್ಲಿ ಚರ್ಚೆ ಆಗುತ್ತಿದೆ. ವರ್ತೂರು ಸಂತೋಷ್ ಅವರು ಶೋ ಮೂಲಕ ಫ್ಯಾನ್ಸ್ ಫಾಲೋವಿಂಗ್ ಸಂಪಾದಿಸಿದ್ದಾರೆ. ಎರಡನೇ ವಾರ ಅವರು ನಾಮಿನೇಟ್ ಆಗಿದ್ರೂ ಕೂಡ, ಜನರ ವೋಟ್ ಅವರನ್ನು ಮನೆಯಲ್ಲೇ ಉಳಿಯುವಂತೆ ಮಾಡಿದೆ.
ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2.5 ಕೋಟಿ ವಂಚನೆ ಆರೋಪ: ಚೈತ್ರಾ ಮಾದರಿ ಮತ್ತೊಂದು ಕೇಸ್ ಬೆಳಕಿಗೆ