ಕೆ.ಆರ್.ಪುರ: ಕೇಂದ್ರ ಕೃಷಿ ಕಾಯ್ದೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೊಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ.
ಕೆ ಆರ್ ಪುರದ ಸಂತೆ ಮಾರುಕಟ್ಟೆಯಿಂದ ಟೌನ್ ಹಾಲ್ ವರೆಗೂ ಹಮ್ಮಿಕೊಂಡಿರುವ ರ‍್ಯಾಲಿಗೆ ಕೆ ಆರ್ ಪುರ ಸಂತೆ ವ್ಯಾಪಾರಗಳ ಒಕ್ಕೂಟ ಅಧ್ಯಕ್ಷ ಎಲೆ ಶ್ರೀನಿವಾಸ್ ನೇತೃತ್ವದಲ್ಲಿ ಗೋಣಿ ಚೀಲ ತೊಟ್ಟು ವಿಭಿನ್ನ ರೈತಿಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಬೆಂಬಲ ನೀಡಿದರು.
ಇದಕ್ಕೆ ಬೆಂಗಳೂರು ಪೂರ್ವ ತಾಲೂಕಿನ ಅನೇಕ ಸಂಘಟನೆಗಳು ಸಾಥ್ ನೀಡಿದವು. ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಕಾಲ್ನಡಿಗೆ ಮೂಲಕ ಟೌನ್ ಹಾಲ್ ಕಡೆ ಹೋರಟಿದ್ದಾರೆ. ಇದರಿಂದ ಹೆದ್ದಾರಿ-75 ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಾಫಿಕ್ ಕ್ಲೀಯರ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಅಧಿಕಾರದ ಆಸೆ ಇದ್ದರೆ ಕಾನೂನು ವಾಪಸ್ ಪಡೆಯಿರಿ
ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ಬೀಡುಬಿಟ್ಟು ಕೃಷಿ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮೂರನೇ ಭಾರಿ ಭಾರತ್ ಬಂದ್ಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಬಿಜೆಪಿ ಅವರಿಗೆ ನಾಳೆ ರಾಜಕೀಯದ ಆಸೆ ಇದ್ದರೆ ಈ ಕಾಯ್ದೆ ಬಿಟ್ಟು ಹಾಕಿ, ಮುಂದಿನ ದಿನಗಳಲ್ಲಿ ರಾಜಕೀಯ ಆಸೆ ಬೇಡ ಅಂದರೆ ಈ ಕಾಯ್ದೆಯನ್ನು ಅಂಗಿಕಾರ ಮಾಡಿ ಎಂದರು.
ರೈತರನ್ನು ಕೂಲಿ ಕಾರ್ಮಿಕರನ್ನಾಗಿಸಿ ಬೀದಿಗೆ ತರುವ ಉದ್ದೇಶದಿಂದ ಬಿಜೆಪಿ ಸರ್ಕಾರ ಕಾಯ್ದೆಯನ್ನು ತರುತ್ತಿದೆ. ಜನರನ್ನು ಡಸ್ಟ್ ಬೀನ್ಗೆ ಎಸೆಯುತ್ತಿದ್ದಾರೆ. 85 ಕೋಟಿ ಜನರನ್ನು ಬದುಕನ್ನ ಕಸಿಯಲು ಸರ್ಕಾರ ಮುಂದಾಗಿದೆ.
ಇದರಿಂದ ದೇಶ ಆರ್ಥಿಕವಾಗಿ ಬರ್ಬಾದ್ ಆಗುತ್ತೆ, ಆದ್ದರಿಂದ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದರು. ಕೆ.ಆರ್.ಪುರದಿಂದ 12 ಕಿಮಿ ನಡಿಗೆಯ ಮೂಲಕ ಜಾಥ ನಡೆಸಿ ಆಮೇಲೆ ವಾಹನದ ಮೂಲಕ ಟೌನ್ ಹಾಲ್ಗೆ ಹೋಗಲು ನಿರ್ಧಾರ ಮಾಡಲಾಗಿದೆ ಎಂದರು.
ಎಂದಿನಂತೆ ವ್ಯಾಪಾರ ವಹಿವಾಟು: ಕೆ.ಆರ್ ಪುರ ಮತ್ತು ಮಹದೇವಪುರಗಳಲ್ಲಿ ಯಾವುದೇ ಬಂದ್ ಬಿಸಿ ಇಲ್ಲ. ಮಾರುಕಟ್ಟಯಲ್ಲಿ ಹೂವು, ತರಕಾರಿ, ಹಣ್ಣು ಸೇರಿದಂತೆ ಅಗತ್ಯ ಸಾಮಗ್ರಿಗಳ ಖರೀದಿ ಎಂದಿನಂತೆ ಇದೆ. ಇಂದು ಗ್ರಾಹಕರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಎಂದಿನಂತೆ ವಾಹನ ಸಂಚಾರ ಆರಂಭವಾಗಿದ್ದು, ಕೆಲಸ ಕಾರ್ಯಗಳಿಗೆ ಹೋಗುವವರು ಎಂದಿನಂತೆ ಸಂಚಾರ ಮಾಡುತ್ತಿದ್ದಾರೆ. ಬಸ್ ಸಂಚಾರ ವ್ಯವಸ್ಥೆ ಮಾಮೂಲಿನಂತೆ ಇದೆ.