ಬೆಂಗಳೂರು: ಭಾನುವಾರ( ಸೆ.17) ಪ್ರಧಾನಿ ನರೇಂದ್ರ ಮೋದಿ ಅವರ 73ನೇ ವರ್ಷದ ಜನ್ಮದಿನ ಆಚರಿಸಲಾಯಿತು. ಈ ಪ್ರಯುಕ್ತ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರ, ಆಯುಷ್ಮಾನ್ ಭಾರತ್ ಕಾರ್ಡ್ಗಳ ನೋಂದಣಿ ಹಾಗೂ ಮೋದಿ ಕ್ರಿಕೆಟ್ ಕಪ್ ಆಯೋಜನೆ ಮಾಡಲಾಗಿತ್ತು.
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ತೇಜಸ್ವಿ ಸೂರ್ಯ ಅವರು, ಪ್ರಧಾನಿ ಮೋದಿಯವರ ಜನ್ಮದಿನದ ಪ್ರಯುಕ್ತ ಇಡೀ ದೇಶಾದ್ಯಂತ ಒಂದು ವಾರ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದು, ಇದೇ ಕಾರಣಕ್ಕಾಗಿ ಬೆಂಗಳೂರು ದಕ್ಷಿಣದಲ್ಲಿ 2 ದಿನಗಳ ಟೆನ್ನಿಸ್ ಬಾಲ್ ಮೋದಿ ಕ್ರಿಕೆಟ್ ಕಪ್ ಕೂಡ ಆಯೋಜಿಸಿದ್ದರು.
ಆಯುಷ್ಮಾನ್ ಭಾರತ್ ಕಾರ್ಡ್ಗಳ ನೋಂದಣಿ: ಮೋದಿ ಕ್ರಿಕೆಟ್ ಕಪ್ ಜೊತೆ ಜೊತೆಯಲ್ಲಿಯೇ ಸ್ವಯಂ ಸೇವಕರ ತಂಡವು ಆಯುಷ್ಮಾನ್ ಭಾರತ್ ಕಾರ್ಡ್ಗಳ ನೋಂದಣಿ ( 1 ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ.ವರೆಗಿನ ವಿಮಾ ಸೌಲಭ್ಯ) ಮತ್ತು ಕ್ಷೇತ್ರದಾದ್ಯಂತ ಹಲವಾರು ಸ್ವಚ್ಛತಾ ಅಭಿಯಾನಗಳನ್ನು ಹಮ್ಮಿಕೊಂಡಿದ್ದರು.
ಇದನ್ನೂ ಓದಿ: ಯಶೋಭೂಮಿಯಲ್ಲಿ 13 ಸಾವಿರ ಕೋಟಿ ವೆಚ್ಚದ ಪಿಎಂ ವಿಶ್ವಕರ್ಮ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಸಮಾಜದ ಅತ್ಯಂತ ಹಿಂದುಳಿದ ಕಡು ಬಡ ಕುಟುಂಬಗಳ ಉದ್ಧಾರ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಥಮ ಆದ್ಯತೆ. ಅವರ ಹುಟ್ಟುಹಬ್ಬದಂದು ಕರಕುಶಲ ಕರ್ಮಿಗಳ ಅಭಿವೃದ್ಧಿಗೆ ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗಿದೆ. ಬೆಂಗಳೂರು ದಕ್ಷಿಣದಲ್ಲಿ ಹಲವು ಸೇವಾ ಕಾರ್ಯಗಳ ಮೂಲಕ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗಿದೆ ಎಂದು ತಿಳಿಸಿದರು.
ಮೋದಿ ಕ್ರಿಕೆಟ್ ಕಪ್: ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಅಭಿಯಾನದಿಂದ ಪ್ರೇರಣೆ ಪಡೆದು, ನಿನ್ನೆ (ಶನಿವಾರ) ಮತ್ತು ಇಂದು (ಭಾನುವಾರ) ಆಯೋಜಿಸಲಾಗಿದ್ದ ಮೋದಿ ಕ್ರಿಕೆಟ್ ಕಪ್ನಲ್ಲಿ 64 ತಂಡಗಳಿದ್ದು 850ಕ್ಕೂ ಅಧಿಕ ಆಟಗಾರರು ಪಾಲ್ಗೊಂಡಿದ್ದರು. ಬೆಂಗಳೂರು ದಕ್ಷಿಣದ ಜಯನಗರದ ಶಾಲಿನಿ, ಎಂ.ಇ.ಎಸ್ ಮತ್ತು ವಿ.ಇ.ಟಿ ಕಾಲೇಜು ಮೈದಾನಗಳಲ್ಲಿ ಪಂದ್ಯಗಳು ನಡೆದವು.
ಈ ಕ್ರಿಕೆಟ್ ಟೂರ್ನಿಯಲ್ಲಿ ಎಲ್ಲಾ ವಯೋಮಾನದ ಕ್ರೀಡಾಪಟುಗಳು ಭಾಗವಹಿಸಿದ್ದರು. ಅತ್ಯಂತ ಹುಮ್ಮಸ್ಸಿನಿಂದ ಪಾಲ್ಗೊಂಡ ಅವರೆಲ್ಲರೂ ಕ್ರೀಡಾ ಸ್ಫೂರ್ತಿ ಶ್ಲಾಘನೀಯ. ವಿಜೇತ ಹಾಗೂ ಭಾಗವಹಿಸಿದ ಎಲ್ಲ ತಂಡಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಉತ್ತಮ ಮತ್ತು ಸದೃಢ ಆರೋಗ್ಯಕ್ಕೆ ಕ್ರೀಡೆಗಳು ತುಂಬಾ ಸಹಕಾರಿ. ಸೋಲು, ಗೆಲುವಿಗಿಂತ ಭಾಗವಹಿಸುವಿಕೆ ಅತೀ ಮುಖ್ಯ ಎಂದು ತೇಜಸ್ವಿ ಸೂರ್ಯ ಹೇಳಿದರು.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಸಭಾಂಗಣ 'ಯಶೋಭೂಮಿ'ಯ ಮೊದಲ ಹಂತ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ- ವಿಡಿಯೋ