ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಇಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ನಾಲ್ಕು ನಿಗಮದ ಸಾವಿರಾರು ನೌಕರರು ಇಂದು ಬೆಳಗ್ಗೆ 11 ಗಂಟೆಯಿಂದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನೆಡೆಸುತ್ತಿದ್ದು, ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳು:
ಸಾರಿಗೆ ನಿಗಮಗಳಲ್ಲಿ ಸಾರಿಗೆ ಕಾರ್ಯಾಚರಣೆ ಯಥಾಸ್ಥಿತಿಗೆ ಬರುವವರೆಗೆ ಕಾರ್ಮಿಕರಿಗೆ ಪೂರ್ಣ ಪ್ರಮಾಣ ವೇತನ ನೀಡುವುದು. ಕಾರ್ಮಿಕರು ಗಳಿಸಿದ್ದ ರಜೆಗಳನ್ನು ಅವರ ಖಾತೆಗೆ ಪುನಃ ನೀಡುವುದು. ಕೊರೊನಾ ಪಾಸಿಟಿವ್ ಆದ ಅವಧಿ ಹಾಗೂ ಚಿಕಿತ್ಸೆ ಪಡೆದ ಅವಧಿಯಲ್ಲಿ ವೇತನ ಸಹಿತ ರಜೆ ನೀಡಬೇಕು. ಕೊರೊನಾದಿಂದ ಮೃತಪಟ್ಟವರ ಕುಟುಂಬದವರಿಗೆ 30 ಲಕ್ಷ ರೂ. ಪರಿಹಾರ ನೀಡಲು ಆದೇಶ ನೀಡಬೇಕು. ಬಿಎಂಟಿಸಿ ನಿಗಮದಲ್ಲಿ ಶಿಫ್ಟ್ನಲ್ಲಿ ಮಾರ್ಗ ಕಾರ್ಯಾಚರಣೆ ಮಾಡಲು ಆರಂಭಿಸಬೇಕು.
ನಿಗಮದಿಂದ ನಿಗಮಕ್ಕೆ ವರ್ಗಾವಣೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ಯಾಕೇಜ್ ರೂಪದಲ್ಲಿ ಸಾರಿಗೆ ಇಲಾಖೆಗೆ ಹಣ ನೀಡಬೇಕು. ಖಾಸಗಿ ಸಹಭಾಗಿತ್ವದ ಎಲೆಕ್ಟ್ರಿಕ್ ಬಸ್ಗಳ ಕಾರ್ಯಾಚರಣೆ ರದ್ದು ಮಾಡಬೇಕು. ಸರ್ಕಾರದ ಒಡೆತನದಲ್ಲಿಯೇ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ ಮಾಡಬೇಕು. ಕೊರೊನಾದಿಂದ ಮೃತಪಟ್ಟ ಕುಟುಂಬದವರಿಗೆ ಉದ್ಯೋಗ ನೀಡಬೇಕೆಂದು ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆಗೆ ನಡೆಸಿದ್ದಾರೆ.