ಬೆಂಗಳೂರು: ''ಈ ಬಾರಿ ರಾಜ್ಯದಲ್ಲಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ವಾಲ್ಮೀಕಿ ಪ್ರಶಸ್ತಿ ನೀಡಲು ಐವರು ಸದಸ್ಯರಿರುವ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ'' ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ ತಿಳಿಸಿದರು.
ರಾಜ್ಯ ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಅಕ್ಟೋಬರ್ 28 ರಂದು ಆಚರಿಸುವ ಕುರಿತು ಇಂದು (ಮಂಗಳವಾರ) ವಿಧಾನಸೌಧದಲ್ಲಿ ಪೂರ್ವಭಾವಿ ಸಭೆ ನಡೆಸಿದ ನಂತರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
''ಈ ಹಿಂದೆ ಆಗಿದ್ದ ನ್ಯೂನತೆಗಳನ್ನು ಸರಿಪಡಿಸಿಕೊಂಡು ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಜಿಲ್ಲಾ ಕೇಂದ್ರಗಳಿಗೆ ಈ ಹಿಂದೆ ವಾಲ್ಮೀಕಿ ಜಯಂತಿಗೆ 1 ಲಕ್ಷ ರೂ. ನೀಡಲಾಗುತಿತ್ತು. ಈಗ 50 ಸಾವಿರ ರೂ.ಗಳನ್ನು ಹೆಚ್ಚಳ ಮಾಡಿ 1.5 ಲಕ್ಷ ರೂ.ಗಳನ್ನು ನೀಡಲಾಗುವುದು. ಅದೇ ರೀತಿ ತಾಲೂಕಿಗೆ 25 ಸಾವಿರ ರೂ. ನೀಡಲಾಗುತಿತ್ತು. ಅದನ್ನು 35 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ'' ಎಂದು ಮಾಹಿತಿ ನೀಡಿದರು.
ಶಾಮನೂರು ಶಿವಶಂಕರಪ್ಪನವರ ಹೇಳಿಕೆ ವೈಯಕ್ತಿಕ: ''ಪ್ರತಿಯೊಂದು ಜಾತಿಯಲ್ಲೂ ಸಮರ್ಥ ಅಧಿಕಾರಿಗಳಿದ್ದಾರೆ. ಜಾತಿ ಆಧಾರದಲ್ಲಿ ಸರ್ಕಾರ ರಚನೆ ಮಾಡಲು ಆಗಲ್ಲ. ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ವೈಯಕ್ತಿಕವಾಗಿದೆ'' ಎಂದು ಹೇಳಿದರು.
''ಕಾಂಗ್ರೆಸ್ ಸರ್ವರಿಗೂ ಸಮಪಾಲು ಸಮಬಾಳು ನೀಡಿದೆ. ಸರ್ಕಾರದಲ್ಲಿ ಜಾತಿ ಬರಲ್ಲ. ಶಾಮನೂರು ಶಿವಶಂಕರಪ್ಪ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಹೇಳಿಕೆ ಕೊಡುವುದು ತಪ್ಪಲ್ಲ. ಆದರೆ, ಶಾಮನೂರು ಆರೋಪಕ್ಕೆ ಮಾನ್ಯತೆ ಕೊಡಬೇಕೋ, ಬೇಡವೋ ಎಂದು ಸಿಎಂ ಸಿದ್ದರಾಮಯ್ಯ ಅವರು ನಿರ್ಧಾರ ಮಾಡುತ್ತಾರೆ'' ಎಂದರು.
''ಇಂತಹ ಅಧಿಕಾರಿಗಳನ್ನು ನೇಮಕ ಮಾಡಿ ಎಂದು ಕೇಳುವುದು ಸರಿಯಲ್ಲ. ನಮ್ಮ ಸರ್ಕಾರದಲ್ಲಿ ಪ್ರತಿಯೊಂದೂ ಸಮಾಜಕ್ಕೆ ಅವಕಾಶ ಇದೆ'' ಎಂದ ಅವರು, ''ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಸಿಎಂ ಹಾಗೂ ಡಿಸಿಎಂ ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಯಾವುದೇ ಕೊರತೆ ಇಲ್ಲ, ಸರ್ಕಾರ ವೇಗವಾಗಿ ಹೋಗುತ್ತಿದೆ. ಹೆಚ್ಚುವರಿ ಡಿಸಿಎಂ ಬೇಕಾದರೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ'' ಎಂದು ತಿಳಿಸಿದರು.
ಪ್ರತ್ಯೇಕ ಸಚಿವಾಲಯಕ್ಕೆ ಬೇಡಿಕೆ: ಪರಿಶಿಷ್ಟರಿಗೆ ಪ್ರತ್ಯೇಕ ಸಚಿವಾಲಯ ನಿರ್ಮಾಣ ಕುರಿತು ಸುದ್ದಿಗಾರರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ''ಪ್ರತ್ಯೇಕ ಸಚಿವಾಲಯ ಬೇಡಿಕೆ ಇದೆ. ಹಿಂದಿನ ಸರ್ಕಾರ ಮಾಡಲು ಹೊರಟಿತ್ತು. ಆದರೆ, ಈಗ ನಾವು ಅದನ್ನು ಮಾಡ್ತೇವೆ. ಅತಿ ಶೀಘ್ರದಲ್ಲೇ ಪ್ರತ್ಯೇಕ ಸಚಿವಾಲಯ ರಚನೆಗೆ ಸಿಎಂ ಸಿದ್ದರಾಮಯ್ಯ ಅವರು ನಿರ್ಧರಿಸುತ್ತಾರೆ'' ಎಂದ ಅವರು, ''ಬರ ಪರಿಸ್ಥಿತಿ ನಿರ್ವಹಣೆಯನ್ನು ನಮ್ಮ ಅಧಿಕಾರಿಗಳು ಸರಿಯಾಗಿ ಮಾಡುತ್ತಿದ್ದಾರೆ. ಕೇಂದ್ರದಿಂದ ನೆರವು ಬರಬೇಕು. ನಮ್ಮ ಅಧಿಕಾರಿಗಳು ಬರಗಾಲದ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಯಾವುದೇ ಸಮಸ್ಯೆಯಾಗಲ್ಲ'' ಎಂದು ಹೇಳಿದರು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಪ್ರಮುಖವಾಗಿ 2023ನೇ ಸಾಲಿನ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲು ಸಮಾಜದ ಮುಖಂಡರು ಮತ್ತು ವಿವಿಧ ಸಂಘಟನೆಗಳ ಅಧ್ಯಕ್ಷರಿಂದ ಸಲಹೆ ಸೂಚನೆ ಪಡೆಯಲಾಯಿತು. ದೇವದುರ್ಗ ಶಾಸಕಿ ಕರೆಮ್ಮ ನಾಯಕ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಕಲ್ಲೇಶ್, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಕರ್ನಾಟಕ ರಾಜ್ಯ ಬುಡಕಟ್ಟು ಜನಾಂಗದ ಅಧ್ಯಯನ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ಮತ್ತು ಪರಿಶಿಷ್ಟ ಪಂಗಡದ ಸಮಾಜ ಹಿರಿಯ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಮಗನ ಬಲವಂತದಿಂದ ದೇವೇಗೌಡರು ಮೈತ್ರಿಗೆ ಒಪ್ಪಿಕೊಂಡಿದ್ದಾರೆ: ಸಚಿವ ಎನ್ ಚಲುವರಾಯಸ್ವಾಮಿ