ಬೆಂಗಳೂರು: 2023ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ನಾಳೆ ರಾಜ್ಯಾದ್ಯಂತ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ ಮಾತನಾಡಿ, ರಾಜ್ಯಮಟ್ಟದ ಶ್ರೀ ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶನಿವಾರ ವಿಧಾನಸೌಧದ ಬ್ಯಾಕ್ವೆಟ್ ಹಾಲ್ ಆಯೋಜಿಸಲಾಗಿದೆ. ಬಸವನಗುಡಿಯಿಂದ ಶ್ರೀ ವಾಲ್ಮೀಕಿ ಜ್ಯೋತಿಯೊಂದಿಗೆ ಸಮುದಾಯದ ಮಹನೀಯರ ಕುರಿತ ಸ್ತಬ್ಧ ಚಿತ್ರಗಳ ಮೆರವಣಿಗೆ, ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಬಸವೇಶ್ವರ ವೃತ್ತದಿಂದ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಸಾರೋಟ್‌ನೊಂದಿಗೆ ವಿವಿಧ ಬುಡಕಟ್ಟು ಕಲಾ ತಂಡಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ವಾಲ್ಮೀಕಿ ಜ್ಯೋತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾಳೆ ಬೆಳಿಗ್ಗೆ 9.30 ಗಂಟೆಗೆ ಶಾಸಕರ ಭವನದ ಮುಂಭಾಗದ ಶ್ರೀ ವಾಲ್ಮೀಕಿ ತಪೋವನದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸುವರು. ನಂತರ ಬಸವನಗುಡಿಯ ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನ ಆದಿಗುರಪೀಠ ಬೇಡರ ಕಣ್ಣಪ್ಪ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ಆಗಮಿಸುವ ವಾಲ್ಮೀಕಿ ಜ್ಯೋತಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಿದ್ದಾರೆ.
ಬೆಳಿಗ್ಗೆ 10ಕ್ಕೆ ವೇದಿಕೆ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಜನಹಳ್ಳಿಯ ಶ್ರೀ ಮಹರ್ಷಿ ಗುರುಪೀಠದ ಜಗದ್ಗುರು ಪ್ರಸನ್ನಾನಂದ ಪುರಿ ಸ್ವಾಮೀಜಿ ಸಾನಿಧ್ಯ ವಹಿಸುವರು ಎಂದು ಹೇಳಿದರು.
ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರ ಪಟ್ಟಿ: ಸರ್ಕಾರದ ಆದೇಶದನ್ವಯ ಸಾಹಿತ್ಯ, ಶೈಕ್ಷಣಿಕ, ಕಲೆ, ಸಾಮಾಜಿಕ ಕ್ಷೇತ್ರ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಮುದಾಯದ ಸಾಧಕರನ್ನು ಆಯ್ಕೆ ಮಾಡಲು ಸಮಿತಿ ರಚಿಸಲಾಗಿತ್ತು. ಎಲ್ಲಾ ಜಿಲ್ಲೆಗಳಿಂದ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಕೆಯಾದ ಅರ್ಜಿಗಳು ಹಾಗೂ ಅರ್ಜಿ ಸಲ್ಲಿಸದ ಸಾಧಕರ ಬಗ್ಗೆಯೂ ಸಹ ಸಮಿತಿಯು ಸುದೀರ್ಘವಾಗಿ ಚರ್ಚಿಸಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಸಾಧಕರ ವಿವರವನ್ನು ಶಿಫಾರಸು ಮಾಡಿತು. ವಿವಿಧ ಕ್ಷೇತ್ರಗಳಿಂದ ಒಟ್ಟು 113 ಅರ್ಜಿಗಳು ಸಲ್ಲಿಕೆಯಾಗಿದ್ದವು. 2023ನೇ ಸಾಲಿನಲ್ಲಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ 8 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದರು.
8 ಸಾಧಕರಿಗೆ ಪ್ರಶಸ್ತಿ: ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪ, ಮಹಾದೇವಮ್ಮ, ರಾಮಣ್ಣ ಮಹಾದೇವ ಗಸ್ತಿ, ಜಿ.ಒ.ಮಹಾಂತಪ್ಪ, ಸೋಮಣ್ಣ, ಶಾರದ ಪ್ರಭು ಹುಲಿ ನಾಯಕ, ಸುಕನ್ಯಾ ಮಾರುತಿ ಹಾಗೂ ಸುಜಾತಮ್ಮ ಅವರಿಗೆ ವಾಲ್ಮೀಕಿ ಪ್ರಶಸ್ತಿ ನೀಡಲಾಗುತ್ತದೆ.