ಬೆಂಗಳೂರು: 2020 ವರ್ಷದ ಕೊನೆಯ ಹಬ್ಬವವಾದ ವೈಕುಂಠ ಏಕಾದಶಿಯನ್ನು ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಸಿಲಿಕಾನ್ ಸಿಟಿಯ ಕೆಲವು ದೇವಸ್ಥಾನಗಳಲ್ಲಿ ಏಕಾದಶಿ ನಿಮಿತ್ತ ಸಂಭ್ರಮ ಮನೆ ಮಾಡಿತ್ತು. ಕೊರೊನಾ ಇದ್ದರೂ ಕೂಡ ತಿರುಪತಿ ಗಿರಿವಾಸ ಶ್ರೀನಿವಾಸನ ದರ್ಶನ ಪಡೆದು ಭಕ್ತರು ಪುನೀತರಾದರು.
ನಗರದ ಇಸ್ಕಾನ್ ದೇವಾಲಯನ್ನು ಸಿಂಗಾರಗೊಳಿಸಲಾಗಿತ್ತು. ವಿವಿಧ ಹೂವುಗಳೊಂದಿಗೆ ದೇವರಿಗೆ ರಾಜಮುಡಿ ಹಾಗೂ ವಜ್ರಖಚಿತ ಕಿರೀಟವನ್ನ ಧರಿಸಲಾಗಿತ್ತು. ಬೆಳಗ್ಗೆ ವೈಕುಂಠ ದ್ವಾರಕ್ಕೆ ವಿಶೇಷ ಪೂಜೆ ಸಲ್ಲಿಸಿ ಬಾಗಿಲು ತೆರೆಯಲಾಯಿತು. ಆದ್ರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಭಕ್ತರಿಗೆ ದೇವರ ದರ್ಶನ ಪಡೆಯಲು ಅವಕಾಶ ನಿರಾಕರಿಸಿದ್ದರಿಂದ ಎಲ್ಲಾ ಸಂಭ್ರಮಾಚರಣೆಯನ್ನ ಆನ್‌ಲೈನ್ ಮೂಲಕವೇ ವೀಕ್ಷಿಸಲು ಏರ್ಪಡು ಮಾಡಲಾಗಿತ್ತು.
ಕೋಟೆ ವೆಂಕಟರಮಣಸ್ವಾಮಿಗೆ ಕೇವಲ ಅರ್ಚಕರು ಮತ್ತು ಆಡಳಿತ ಮಂಡಳಿ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇಲ್ಲಿಯೂ ಕೂಡ ದೇವರ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ಜನರು ಮುಚ್ಚಲಾಗಿದ್ದ ಮುಖ್ಯ ದ್ವಾರದ ಬಳಿಯೇ ದೇವರಿಗೆ ನಮಸ್ಕರಿಸಿದರು.
ಇದನ್ನೂ ಓದಿ : ಸಂಪಂಗಿರಾಮನಗರದಲ್ಲಿ ವೈಕುಂಠ ಏಕಾದಶಿ: ಪಾಂಡುರಂಗನಿಗೆ ವಿಶೇಷ ಅಲಂಕಾರ
ಇನ್ನೂ ವೈಯಾಲಿಕಾವಲ್‌ನಲ್ಲಿ ಚಿಕ್ಕ ತಿರುಪತಿ ದೇವಸ್ಥಾನದಲ್ಲಿ ಮುಂಜಾನೆಯೇ ವೆಂಕಟೇಶ್ವರನಿಗೆ ಏಕಾಂತ ಸೇವೆ, ಗೋಧಾ ಹಾಗೂ ಪುಷ್ಪಾಲಂಕಾರ ಮಾಡಲಾಗಿತ್ತು. ಬೆಳಗ್ಗೆ ವೆಂಕಟೇಶ್ವರನ ಧರ್ಮದರ್ಶನಕ್ಕೆ ಅಣುವು ಮಾಡಿಕೊಡಲಾಯ್ತು. ದೇವರ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನಸಾಗರವೇ ಹರಿದುಬಂದಿತ್ತು.
ರಾಜಾಜಿನಗರದ ವೈಕುಂಠ ಕಲ್ಯಾಣ ದೇವಸ್ಥಾನದಲ್ಲೂ ಕೂಡ ದೇವರಿಗೆ ವಿಶೇಷ ಪೂಜೆಗಳನ್ನ ಸಲ್ಲಿಸಲಾಗಿತ್ತು. ಇಲ್ಲಿಯೂ ಕೂಡ ದೇವರನ್ನ ಕಣ್ತುಂಬಿಕೊಳ್ಳಲು ಭಕ್ತ ಸಾಗರ ಬಂದಿತ್ತು. ಈ ಎರಡೂ ದೇವಸ್ಥಾನಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶಗಳನ್ನ ಸರ್ಕಾರದ ಮಾರ್ಗ ಸೂಚಿಯಂತೆಯೇ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಇದ್ದರೆ ಮಾತ್ರ ಒಳ ಪ್ರವೇಶಿಸಲು ಅನುಮತಿ ನೀಡಲಾಗಿತ್ತು.