ಕನ್ನಡ ಚಿತ್ರರಂಗದ ಕಲಾವಿದರಿಗೆ ಹಾಗೂ ಸದಸ್ಯರಿಗೆ ಇಂದಿನಿಂದ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಮೇ 31 ಹಾಗೂ ಜೂನ್ 1 ರಂದು ಎರಡು ದಿನಗಳ ಕಾಲ, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಭವನ ಕಟ್ಟಡದಲ್ಲಿ, ಉಚಿತ ಕೋವಿಡ್ ವ್ಯಾಕ್ಸಿನ್ ನೀಡಲಾಗುವುದು.
ಈ ಲಸಿಕೆ ಅಭಿಯಾನಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಸಂಸದೆ ಸುಮಲತಾ ಚಾಲನೆ ನೀಡಲಿದ್ದಾರೆ. ಈ ವೇಳೆ ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಹಾಗೂ ಬಿಬಿಎಂಪಿ ಆಯುಕ್ತ ಹಾಗೂ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಹಿರಿಯ ನಟ ದೊಡ್ಡಣ್ಣ, ನಟಿ ನಿರ್ದೇಶಕಿ ರೂಪ ಐಯ್ಯರ್ ನೇತೃತ್ವದಲ್ಲಿ ವ್ಯಾಕ್ಸಿನ್ ಶಿಬಿರ ಹಮ್ಮಿಕೊಂಡಿದ್ದು, 18 ವಯಸ್ಸಿನ ಮೇಲ್ಪಟ್ಟ ಎಲ್ಲಾ ಕಲಾವಿದರಿಗೆ ಉಚಿತ ವ್ಯಾಕ್ಸಿನ್ ನೀಡಲಾಗುತ್ತಿದೆ.
ಇನ್ನು, ವ್ಯಾಕ್ಸಿನ್ ಪಡೆಯಲು ಕಲಾವಿದರು, ಕಲಾವಿದರ ಸಂಘದ ಸದಸ್ಯರಾಗಿರಬೇಕು. ಹಾಗೇ ಆಧಾರ್ ಕಾರ್ಡ್ ತರಬೇಕು. ಕಲಾವಿದರ ಕುಟುಂಬಕ್ಕೂ ಉಚಿತ ವ್ಯಾಕ್ಸಿನೇಷನ್ ವ್ಯವಸ್ಥೆ ಮಾಡಲಾಗಿದೆ.
ಇಂದು 250 ಕಲಾವಿದರಿಗೆ ವ್ಯಾಕ್ಸಿನ್ ನೀಡಲಾಗುತ್ತಿದ್ದು, ನಾಳೆ 250 ಕಲಾವಿದರಿಗೆ ವ್ಯಾಕ್ಸಿನ್ ನೀಡಲಾಗುತ್ತೆ. ಎರಡು ದಿನಗಳಲ್ಲಿ ಒಟ್ಟು 500 ಕಲಾವಿದರಿಗೆ ವ್ಯಾಕ್ಸಿನ್ ವ್ಯವಸ್ಥೆ ಮಾಡಲಾಗಿದೆ. ಸ್ಯಾಂಡಲ್‌ವುಡ್ ಇಂಡಸ್ಟ್ರಿಯ ನೋಂದಾಯಿತ ಕಲಾವಿದರಿಗಾಗಿ ಈ ಲಸಿಕೆ ಶಿಬಿರ ನಡೆಯತ್ತಿದೆ.