ಬೆಂಗಳೂರು: ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ನಿಧನ ಹಿನ್ನೆಲೆ ಸಚಿವ ವಿ ಸೋಮಣ್ಣ, ಕಾರ್ಪೊರೇಟರ್ ಉಮೇಶ್ ಶೆಟ್ಟಿ ಹಾಗೂ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್ ಅವರು ಮಣಿಪಾಲ್ ಆಸ್ಪತ್ರೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.
ಪೊಲೀಸರ ಅನುಮತಿ ಪಡೆದು ಬೆಳಗ್ಗೆ 10.30ಕ್ಕೆ ಮಣಿಪಾಲ್ ಆಸ್ಪತ್ರೆಯಿಂದ ರೈ ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬಸ್ಥರು ಬಿಡದಿಗೆ ತೆಗೆದುಕೊಂಡು ಹೋಗಲಿದ್ದಾರೆ. ಮಣಿಪಾಲ್ ಆಸ್ಪತ್ರೆಯಿಂದ ಹೊರಟು ಟೌನ್ ಮಾರ್ಗವಾಗಿ ಮೈಸೂರು ರೋಡ್ ಫ್ಲೈಓವರ್ ಮುಖಾಂತರ ಬಿಹೆಚ್ ಇಎಲ್ ಸರ್ಕಲ್, ನಾಯಂಡಹಳ್ಳಿ, ಜ್ಞಾನಭಾರತಿ ಸರ್ಕಲ್, ಕೆಂಗೇರಿ ಹಾಗೂ ಕುಂಬಳಗೂಡು ಮಾರ್ಗವಾಗಿ ಬಿಡದಿಯ ರೈ ಅವರ ನಿವಾಸಕ್ಕೆ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ.
ಅವರ ಕಿರಿಯ ಪುತ್ರ ರಾಕಿ ರೈ ಕೆನಡಾದಲ್ಲಿ ಸಿಲುಕಿದ್ದು, ಸದ್ಯ ಆಸ್ಪತ್ರೆಯಲ್ಲಿ ಹಿರಿಯ ಪುತ್ರ ರಿಕ್ಕಿ ರೈ ಇದ್ದಾರೆ. ಇನ್ನು ಮುತ್ತಪ್ಪ ರೈ ಅವರ ಅಂತ್ಯಕ್ರಿಯೆಯು ಬಿಡದಿಯಲ್ಲಿ ನಡೆಯಲಿದ್ದು, ಭಂಟ ಸಮುದಾಯದ ಪ್ರಕಾರ ಅವರ ಧರ್ಮಪತ್ನಿ ಸಮಾಧಿಯ ಬಳಿಯಲ್ಲೇ ಅಂತಿಮ ಸಂಸ್ಕಾರ ನಡೆಯಲಿದೆ. ಲಾಕ್ಡೌನ್ ಇರುವುದರಿಂದ ಕುಟುಂಬದ 25 ಜನ ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತಾರೆ.
ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ರೈ ಆರೋಗ್ಯ ಸ್ಥಿತಿ ಗಂಭೀರವಾದ್ದರಿಂದ ಏಪ್ರಿಲ್ 30ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ರೈ, ಇಂದು ನಸುಕಿನಜಾವ 2:30 ರ ಸುಮಾರಿಗೆ ಮೃತಪಟ್ಟಿದ್ದಾರೆ.