ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ಬಹುಮತ ಸಾಬೀತುಪಡಿಸಲಿದ್ದು, ನಾಳೆಯಿಂದಲೇ ರಾಜ್ಯದಲ್ಲಿ ಹೊಸ ಪರ್ವ ಆರಂಭಗೊಳ್ಳಲಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದ ಸೋಮಣ್ಣ ಅನಾರೋಗ್ಯ ನಿಮಿತ್ತ ಸಭೆಯ ಮಧ್ಯದಲ್ಲೇ ನಿರ್ಗಮಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಸರಿಯಿಲ್ಲ. ಎಸಿಯಲ್ಲಿ ಇರಲು ಸಾಧ್ಯವಿಲ್ಲ. ಹಾಗಾಗಿ ನಾಯಕರ ಅನುಮತಿ ಪಡೆದು ನಿರ್ಗಮಿಸುತ್ತಿದ್ದೇನೆ ಎಂದರು.
ನಾಳೆ ಬಹುಮತ ಸಾಬೀತುಪಡಿಸಲಿದ್ದೇವೆ. ಯಡಿಯೂರಪ್ಪ ಮುಂದಿನ ಮೂರು ವರ್ಷ, 10 ತಿಂಗಳು ಉತ್ತಮ ಆಡಳಿತ ನೀಡಲಿದ್ದಾರೆ. ನಾಳೆಯಿಂದಲೇ ರಾಜ್ಯದಲ್ಲಿ ಹೊಸ ಪರ್ವ ಆರಂಭವಾಗಲಿದೆ. ಯಡಿಯೂರಪ್ಪ ಅವರ ಅನುಭವದ ಆಧಾರದಲ್ಲಿ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಬರ ಇದೆ. ಅದಕ್ಕೆ ಪರಿಹಾರ ನೀಡುವುದು ಸೇರಿದಂತೆ ಉತ್ತಮ ಆಡಳಿತ ನೀಡಲು ನಾಳೆಯಿಂದಲೇ ಸಿಎಂ ಕಾರ್ಯೋನ್ಮುಖರಾಗಲಿದ್ದಾರೆ ಎಂದು ಹೇಳಿದರು.