ಬೆಂಗಳೂರು: ಗೋವಿಂದರಾಜನಗರ ಕ್ಷೇತ್ರದಲ್ಲಿ ಎಮ್.ಸಿ.ಲೇಔಟ್ ಪಾರ್ಕ್ ಉದ್ಘಾಟನೆಗೊಳಿಸಿದ ವಸತಿ ಸಚಿವ ವಿ. ಸೋಮಣ್ಣ, ಮೂರು ವರ್ಷದಲ್ಲಿ ರಾಜ್ಯವನ್ನು ಗುಡಿಸಲು ಮುಕ್ತಗೊಳಿಸಲು ಪೀಠಿಕೆ ಹಾಕಿದ್ದೇವೆ ಎಂದರು.
ಮುಂದಿನ ಒಂದೂವರೆ ವರ್ಷದೊಳಗೆ ಗೋವಿಂದರಾಜನಗರ ಕ್ಷೇತ್ರ ಹಾಗೂ ಇನ್ನೂ ಮೂರು ವರ್ಷದೊಳಗೆ ರಾಜ್ಯವನ್ನೇ ಗುಡಿಸಲು ಮುಕ್ತ ಮಾಡಲಾಗುವುದು. ಬೆಂಗಳೂರು ನಗರದಲ್ಲಿ 1 ಲಕ್ಷ, ರಾಜ್ಯದ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 1 ಲಕ್ಷದ 80 ಸಾವಿರ ಹಾಗೂ ಹಳ್ಳಿಗಾಡುಗಳಲ್ಲಿ 5 ಲಕ್ಷ ಮನೆ ನಿರ್ಮಿಸಲಾಗುವುದು ಎಂದು ಹೇಳಿದ್ರು.
ಜನವರಿ 14ರ ನಂತರ ಗೋವಿಂದರಾಜನಗರ ಕ್ಷೇತ್ರದಲ್ಲಿ ವಿವಿಧ ಕಟ್ಟಡಗಳ ಕಾಮಗಾರಿ ಆರಂಭವಾಗುತ್ತದೆ. ಸಿಎಂ ಯಡಿಯೂರಪ್ಪ ಈ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಿದ್ದು, 160 ಹಾಸಿಗೆಯ ಆಸ್ಪತ್ರೆ ನಿರ್ಮಾಣ ಕಾಮಗಾರಿ ಆರಂಭ ಮಾಡಲಿದ್ದಾರೆ. 128 ಕೋಟಿ ರುಪಾಯಿ ವೆಚ್ಚದಲ್ಲಿ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಪೊಲೀಸ್ ಔಟ್ ಪೋಸ್ಟ್ ಕಟ್ಟಡಗಳ ನಿರ್ಮಾಣ ಮಾಡಲಾಗುವುದು. 30 ಕೋಟಿ ರೂ ವೆಚ್ಚದಲ್ಲಿ ಪಾರ್ಕ್ ಗಳ ಆಧುನೀಕರಣ ನಡೆಯಲಿದೆ ಎಂದರು.
ಮಾರೇನಹಳ್ಳಿ ವಾರ್ಡ್ನಲ್ಲಿ ಎಮ್.ಸಿ. ಲೇಔಟ್ ಪಾರ್ಕ್ 1 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ಪಾರ್ಕ್ಗೆ ವೈಫೈ ಸೌಲಭ್ಯ, ನಗೆ ಕೂಟದ ಜಾಗ, ಮಕ್ಕಳಿಗೆ ಆಟದ ವಸ್ತುಗಳು ಹಾಗೂ ಹಿರಿಯರಿಗೆ ವ್ಯಾಯಾಮ ಸಲಕರಣೆಗಳನ್ನು ಅಳವಡಿಸಲಾಗಿದೆ.
ಸ್ಥಳೀಯ ಕಾರ್ಪೋರೇಟರ್ ಮಧುಕುಮಾರಿ ವಾಗೀಶ್ ಮಾತನಾಡಿ, ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಉಪಯೋಗವಾಗುವಂತೆ ಪಾರ್ಕ್ ನಿರ್ಮಾಣ ಮಾಡಲಾಗಿದೆ ಎಂದರು.
ಪಾರ್ಕ್ ಉದ್ಘಾಟನೆ ವೇಳೆ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ವಿ. ಸೋಮಣ್ಣ, ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಯಾಕೆ ಮಾಡ್ತೀರಾ? ಎಂದು ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕೆಂದು ಸೂಚನೆ ನೀಡಿದ್ರು.