ಬೆಂಗಳೂರು : ಗೋವು ಮಾರಾಟವನ್ನೇ ರಾಜ್ಯ ಸರ್ಕಾರ ನಿಷೇಧ ಮಾಡಲಿ ಎಂದು ಮಾಜಿ ಸಚಿವ ಯು ಟಿ ಖಾದರ್ ಒತ್ತಾಯಿಸಿದ್ದಾರೆ.
ಗೋಹತ್ಯೆ ನಿಷೇಧ ಮಸೂದೆ ಜಾರಿ ಮಾಡುವ ವಿಚಾರ ವಿಧಾನಸೌಧದಲ್ಲಿ ಮಾತನಾಡಿ, ಮೊದಲಿನಿಂದಲೂ ಕಾನೂನು ತರ್ತೀವಿ ಅಂತಾ ಹೇಳ್ತಾನೆ ಇದ್ದಾರೆ. ವಿಧಾನಸಭೆಯಲ್ಲಿ ಮೊದಲು ಬಿಲ್ ಮಂಡನೆ ಮಾಡಲಿ, ಗೋ ಹತ್ಯೆ ನಿಷೇಧ ಬಿಲ್ ನೋಡಿ ನಾವು ತೀರ್ಮಾನ ಮಾಡ್ತೇವೆ ಅಂದಿದ್ದಾರೆ.
ಗೋ ಹತ್ಯೆ ನಿಷೇಧ ಇಲ್ಲೇ ಯಾಕೆ? : ಗೋವಾ, ಮಿಜೋರಾಂ, ಕೇರಳದಲ್ಲಿ ಯಾಕೆ ಗೋ ಹತ್ಯೆ ನಿಷೇಧ ಮಾಡಿಲ್ಲ. ಅಲ್ಲೆಲ್ಲ ತಿನ್ನಲು ಬಿಟ್ಟು ಇಲ್ಲಿ ತರ್ತೇವೆ ಅಂದರೆ ಏನು? ಅದು ಕೇವಲ ಭಾವನಾತ್ಮಕ ವಿಷಯ ಅಲ್ಲವೇ? ಒನ್ ನೇಷನ್ ಅಂತಾರೆ, ಇಡೀ ದೇಶಕ್ಕೇ ಒಂದೇ ಕಾನೂನು ತರಲಿ ಎಂದು ಸಲಹೆ ಇತ್ತರು. ಇಲ್ಲಿ ಜಾರಿಗೆ ತರೋದು ನೈತಿಕ ಪೊಲೀಸ್ಗಿರಿಗೆ ಅವಕಾಶ ಮಾಡೋಕೆ ಎಂದು ಸರ್ಕಾರದ ವಿರುದ್ಧ ಯು ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಜನಸಾಮಾನ್ಯರಿಗೆ ರೇಷನ್ ಕಾರ್ಡ್ ಸಿಗ್ತಿಲ್ಲ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡ್ತಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗ್ರಾಪಂ ಚುನಾವಣೆ ಬಂದಿದೆ. ಅದಕ್ಕೆ ಮಾರಕ ವಿಧೇಯಕಗಳನ್ನ ತರಲು ಹೊರಟಿದ್ದಾರೆ. ರೈತರ ಮಾರಕ ವಿಧೇಯಕ ತಂದಿದ್ದಾರೆ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ತಂದ್ರು. ಈ ಕಾಯ್ದೆಯ ಬಗ್ಗೆ ಚರ್ಚೆಗೆ ಅವಕಾಶ ನೀಡಿದ್ರಾ? ಇವರು ಭಾವನಾತ್ಮಕ ವಿಷಯಗಳನ್ನ ತರ್ತಾರೆ. ಗೋಹತ್ಯೆ ನಿಷೇಧ ಕಾಯ್ದೆ ಇಂದಿರಾ ಗಾಂಧಿ ತಂದಿದ್ದರು. ಅದನ್ನು ಬಲಪಡಿಸುವ ಕೆಲಸ ಮಾಡಲಿ ಎಂದರು.
ಮತಾಂತರ ನಿಷೇಧ ಕಾಯ್ದೆ ಬಗ್ಗೆ ಯಾವ ಸ್ಪಷ್ಟನೆಯಿದೆ? ಇವರಿಗೆ ಯಾವುದೇ ಇಚ್ಛಾಶಕ್ತಿಯಿಲ್ಲ. ಲವ್ ಜಿಹಾದ್ ತರ್ತಿದ್ದಾರೆ. ಈ ಕಾಯ್ದೆಯಲ್ಲಿ ಏನಿದೆ ಅನ್ನೋವುದನ್ನು ನೋಡಬೇಕಲ್ಲ. ಅದು ಸಮಾಜಕ್ಕೆ ಮಾರಕವೇ ಇಲ್ಲವೇ ಅನ್ನೋದನ್ನ ತಿಳಿಯಬೇಕಲ್ಲ. ಜಿಹಾದ್ ಪದ ಇಲ್ಲಿ ಯಾಕೆ ಬಳಸಬೇಕು. ಜಿಹಾದ್ ಅನ್ನೋದು ಅರೇಬಿಕ್ ಪದ. ಕನ್ನಡದಲ್ಲಿ ಯಾವುದೇ ಪದ ಅವರಿಗೆ ಸಿಗಲಿಲ್ವೆ? ಎಂದು ಪ್ರಶ್ನಿಸಿದ್ರು.
ಮಕ್ಕಳ ಸ್ಕಾಲರ್ ಶಿಪ್ ಕೊಡುವ ಯೋಗ್ಯತೆಯಿದೆಯೇ? ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಲೋನ್ ಇಲ್ಲ. ಪಿಹೆಚ್ಡಿ ವಿದ್ಯಾರ್ಥಿಗಳ ಲೋನ್ ಕಟ್ ಮಾಡಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಅವರು ಯೋಚಿಸಲಿ ಎಂದು ಸಲಹೆ ಇತ್ತರು.