ಬೆಂಗಳೂರು: ಬಿಜೆಪಿ ಕರಾವಳಿ ಭಾಗದಲ್ಲಿ ಮಾಡಿಸಿರುವ ಆಂತರಿಕ ಸಮೀಕ್ಷೆಯ ವರದಿ ನಮಗೆ ನಾಲ್ಕು ತಿಂಗಳು ಮುನ್ನವೇ ತಿಳಿದಿದೆ ಎಂದು ಮಾಜಿ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ, ಕರಾವಳಿ ಭಾಗದಲ್ಲಿ ಬಿಜೆಪಿ 3-4 ಸ್ಥಾನಗಳನ್ನ ಕಳೆದುಕೊಳ್ಳುವ ವಿಚಾರ ನಮಗೆ ತಿಳಿದಿದೆ. ಬಿಜೆಪಿ ಪಕ್ಷದ ಆಂತರಿಕ ಸಮೀಕ್ಷೆ ಇದೆ ಇದು ನಾಲ್ಕು ತಿಂಗಳ ಮುಂಚಿತವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬಂದಿದೆ. ನಮ್ಮ ವರದಿಯಲ್ಲಿ ಇನ್ನೂ ಹೆಚ್ಚಿನ ಸೀಟ್ಗಳನ್ನ ಕರಾವಳಿ ಭಾಗದಲ್ಲಿ ಗೆಲ್ಲುತ್ತೇವೆ ಎಂದು ಇದೆ.
ಎಂಟಕ್ಕೆ ಎಂಟು ಸೀಟುಗಳನ್ನು ಗೆಲ್ಲೋದಕ್ಕೆ ನಮ್ಮ ಪ್ರಯತ್ನವನ್ನ ಮಾಡ್ತೇವೆ. ಕರಾವಳಿ ಜನತೆ ಈ ಬಾರಿ ತಿರ್ಮಾನ ಮಾಡಿದ್ದಾರೆ. ಒಂದು ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸುವ ಮೂಲಕ ಈ ದೇಶಕ್ಕೆ ಕರಾವಳಿ ಜನತೆ ಒಂದು ಸಂದೇಶವನ್ನ ಕೊಡಲಿದ್ದಾರೆ ಎಂದರು. ಕೋಮುವಾದ, ದ್ವೇಷ ಬಿತ್ತುವುದು ಹಾಗೂ ಸಮಾಜದ ಅಭಿೃದ್ಧಿಯನ್ನ ನಿರ್ಲಕ್ಷಿಸಿದರೆ ಕರಾವಳಿ ಭಾಗದ ಜನರು ಅದನ್ನು ಒಪ್ಪೋದಿಲ್ಲ. ನಮಗೆ ಒಗ್ಗಟ್ಟು, ಪ್ರೀತಿ ಮತ್ತು ಜನರ ಅಭಿವೃದ್ಧಿಯೇ ಮುಖ್ಯ ಅಂತ ಹೇಳಿ ಈ ಚುನಾವಣೆಯಲ್ಲಿ ತೋರಿಸ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲಿಂಗಾಯತ ಸಮುದಾಯದ ಮುಖಂಡರ ಸಭೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತರಿಗೆ ಹೆಚ್ಚಿನ ಸೀಟು ಬೇಡಿಕೆ ವಿಚಾರವಾಗಿ ಫೆ.13 ರಂದು ಸಮುದಾಯದ ನಾಯಕರು ವಿಶೇಷ ಸಭೆ ಕರೆದಿದ್ದಾರೆ. ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಬೆಂಗಳೂರಿನ ಬಸವಭವನದಲ್ಲಿ ನಡೆಯುವ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಅಲ್ಲಮ ಪ್ರಭುಪಾಟೀಲ್, ಬಸವರಾಜ ರಾಯರೆಡ್ಡಿ, ಅಮರೇಗೌಡ ಬಯ್ಯಾಪೂರ, ಬಸನಗೌಡ ಬಾದರ್ಲಿ,ಅನಿಲ್ ಕುಮಾರ್ ತಡಕಲ್, ನಾಗರಾಜ ಚಬ್ಬಿ ಸೇರಿದಂತೆ ಹಲವರು ಭಾಗಿ ಸಾಧ್ಯತೆ ಇದೆ.
224 ವಿಧಾನಸಭೆ ಕ್ಷೇತ್ರಗಳ ಪೈಕಿ ಕನಿಷ್ಠ 65 ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿರುವ ನಾಯಕರು ಈ ಕುರಿತು ಒಂದು ಅಂತಿಮ ತೀರ್ಮಾನ ಕೈಗೊಂಡು ಕಾಂಗ್ರೆಸ್ ಪಕ್ಷಕ್ಕೆ ಮನವಿ ಸಲ್ಲಿಸಲಿದ್ದಾರೆ. ಹೈಕಮಾಂಡ್ಗೆ ಮನವಿ ಸಲ್ಲಿಸುವುದಕ್ಕೆ ಮುನ್ನ ಅಂತಿಮ ನಿರ್ಣಯ ಕೈಗೊಳ್ಳಲು ಈ ಸಭೆ ಕರೆಯಲಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ 48 ಮಂದಿಗೆ ಟಿಕೆಟ್ ನೀಡಲಾಗಿತ್ತು. ಈ ಸಾರಿ ಸಮುದಾಯದ ಮತದಾರರು ಕಾಂಗ್ರೆಸ್ನತ್ತ ವಾಲುತ್ತಿರುವ ಹಿನ್ನೆಲೆ ಇನ್ನಷ್ಟು ಹೆಚ್ಚು ಸ್ಥಾನ ನೀಡುವ ಬೇಡಿಕೆ ಮುಂದೂಡಲು ತೀರ್ಮಾನಿಸಲಾಗಿದೆ.
ಮತ್ತೆ ಮೂಡಿದ ಮುಂದಿನ ಸಿಎಂ ಪ್ರಸ್ತಾಪ: ರಾಜ್ಯ ಕಾಂಗ್ರೆಸ್ನಲ್ಲಿ ಮುಂದುವರೆದ ಮುಂದಿನ ಸಿಎಂ ಜಟಾಪಟಿ ಮತ್ತೊಮ್ಮೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟವನ್ನು ಬಯಲು ಮಾಡಿದೆ. ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದ ಪ್ರತ್ಯೇಕ ತಂಡ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಯಾತ್ರೆ ಹಮ್ಮಿಕೊಂಡಿದೆ. ಈ ಪ್ರಜಾ ಧ್ವನಿ ಯಾತ್ರೆ ಸಂದರ್ಭದಲ್ಲಿಯೇ ಮುಂದಿನ ಸಿಎಂ ವಿಚಾರ ಪ್ರಸ್ತಾಪವಾಗಿದ್ದು ವಿಪರ್ಯಾಸ.
ಪ್ರಜಾಧ್ವನಿ ಕಾರ್ಯಕ್ರಮ ಸಿಎಂ ಕೂಗು ಕೇಳಿ ಬಂದಿದ್ದು, ಅತ್ತ ಸಿದ್ದರಾಮಯ್ಯ ನೇತೃತ್ವದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಘೋಷಣೆ ಕೇಳಿಬಂದರೆ, ಇತ್ತ ಡಿಕೆಶಿ ನೇತೃತ್ವದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಡಿಕೆಶಿ ಮುಂದಿನ ಸಿಎಂ ಕೂಗು ಕೇಳಿಬಂದಿದೆ.
ಇದನ್ನೂ ಓದಿ: ವೋಟರ್ ಲಿಸ್ಟ್ ನಿಂದ ಮತದಾರರ ಹೆಸರು ಡಿಲಿಟ್ ಕಲಬುರಗಿಯಲ್ಲೂ ಯತ್ನ, ಕಾಂಗ್ರೆಸ್ ಆರೋಪ