ಬೆಂಗಳೂರು: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅಲ್ಲದೆ ಘನತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು 10 ಮಹಾನಗರ ಪಾಲಿಕೆಗಳ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಿಗೂ ನದಿ ಮೂಲದಿಂದಲೇ ಕುಡಿಯುವ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೊದಲಿಗೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳಿಗೆ 24X7 ನೀರು ಪೂರೈಸಲು ಅಮೃತ್ ಯೋಜನೆಯಡಿ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ವಿಶ್ವಬ್ಯಾಂಕ್ ನೆರವು ಪಡೆಯಲಾಗುವುದು. ಇದರಿಂದಾಗಿ ಈ ಬಾರಿ ಬೇಸಿಗೆಯಲ್ಲಿ ಕುಡಿಯೋ ನೀರಿನ ಸಮಸ್ಯೆಯಾಗಲ್ಲ ಎಂದು ಹೇಳಿದರು.
ಸ್ವಚ್ಛತೆಗೂ ಮೊದಲ ಆದ್ಯತೆ ನೀಡಬೇಕೆಂದು ಸೂಚನೆ ಕೊಟ್ಟಿದ್ದೇನೆ. ಮಹಾನಗರ ಪಾಲಿಕೆಗಳಲ್ಲಿ ಶೇ. ನೂರರಷ್ಟು ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚಿಸಲಾಗಿದೆ. ಈಗಾಗಲೇ ಶೇ. 90ರಷ್ಟು ಪ್ಲಾಸ್ಟಿಕ್ ನಿಷೇಧವಾಗಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ನಿಷೇಧಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಸ್ತೆ ಚರಂಡಿ, ಒಳಚರಂಡಿ ನಿರ್ಮಾಣದ ಬಗ್ಗೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಲು ಸೂಚಿಸಲಾಗಿದೆ. ಶೇ. 90ರಷ್ಟು ಶೌಚಾಲಯಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಇನ್ನು ಉಳಿದ ಶೇ. 10ರಷ್ಟು ಶೌಚಾಲಯಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ 10 ಮಹಾನಗರ ಪಾಲಿಕೆಗಳಿಗೆ ಹಂತ ಹಂತವಾಗಿ ಭೇಟಿ ನೀಡಿ ಪರಿಶೀಲಿಸಲಾಗುವುದು. ಫೆ. 27ರಂದು ತುಮಕೂರು, ಫೆ. 28 ಮಂಗಳೂರು ಹಾಗೂ ಮಾರ್ಚ್ 7ರಂದು ಬೆಳಗಾವಿಗೆ ಭೇಟಿ ನೀಡಿ ಪಾಲಿಕೆಗಳ ಪರಿಶೀಲನೆ ನಡೆಸುತ್ತೇನೆ. ಮುಂಬರುವ ಬಜೆಟ್ನಲ್ಲಿ ನಗರಾಭಿವೃದ್ಧಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಅದೇ ರೀತಿ 7 ಸ್ಮಾರ್ಟ್ ಸಿಟಿಗಳ ಪ್ರಗತಿ ಪರಿಶೀಲನೆ ಸಹ ಮಾಡಲಾಗಿದೆ ಎಂದು ಹೇಳಿದರು.
ಆನ್ಲೈನ್ ಮೂಲಕ ಕಟ್ಟಡ ನಕ್ಷೆ: ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆನ್ಲೈನ್ ಮೂಲಕ ಕಟ್ಟಡ ನಕ್ಷೆ ಹಾಗೂ ನೀರು ಸಂಪರ್ಕಕ್ಕೆ ಅನುಮತಿ ನೀಡಲಾಗುವುದು. ತೆರಿಗೆ ಸಂದಾಯವಾದ ಕೂಡಲೇ ಕಟ್ಟಡ ನಕ್ಷೆ ಮತ್ತು ನೀರು ಸಂಪರ್ಕಕ್ಕೆ ಅನುಮತಿ ಸಿಗಲಿದೆ ಎಂದು ಹೇಳಿದರು.
ಪೌರ ಕಾರ್ಮಿಕರಿಗೆ ಮನೆ: ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ 4,300 ಮನೆ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಪ್ರತಿ ಮನೆಗೆ 7.50 ಲಕ್ಷ ವೆಚ್ಚವಾಗಲಿದೆ ಎಂದರು. ಪಾಲಿಕೆ ವ್ಯಾಪ್ತಿಯ ಯೋಜನಾ ಪ್ರಾಧಿಕಾರಗಳ ಸಭೆ ಕರೆದು ನಿವೇಶನಗಳ ಬೇಡಿಕೆ ಇದ್ದರೆ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಬೆಂಗಳೂರಲ್ಲಿ ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಈ ಬಗ್ಗೆ ನನಗೂ ಬೇಜಾರಿದೆ. ಜನಪ್ರತಿನಿಧಿಗಳೂ ಸಹ ಇದಕ್ಕೆ ಕೈಜೋಡಿಸಬೇಕಿದೆ ಎಂದರು.