ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಆಸ್ಪತ್ರೆ ಬಿಟ್ಟು ಓಡಿಹೋಗುವ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸಿಬ್ಬಂದಿಗೆ ಕೊರೊನಾದಿಂದ ತೊಂದರೆಯಾದರೆ ಸರ್ಕಾರದಿಂದ 50 ಲಕ್ಷ ಪರಿಹಾರ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದ್ದಾರೆ.
ಮಹದೇವಪುರ ವಲಯ ವ್ಯಾಪ್ತಿಯ ಕೋವಿಡ್ ನಿಯಂತ್ರಣ ಸಭೆಯಲ್ಲಿ, ಖಾಸಗಿ ಆಸ್ಪತ್ರೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ ನಾಲ್ಕು ದಿನಗಳ ಹಿಂದಿನ ಸಭೆಯಲ್ಲಿ ಮಹದೇವಪುರ ವಲಯ ವ್ಯಾಪ್ತಿಯ 32 ಆಸ್ಪತ್ರೆಗಳ ಸಂಬಂಧಪಟ್ಟವರು ಮುಂದಿನ ಸಭೆಯಲ್ಲಿ ಹಾಜರಾಗಬೇಕು ಎಂದು ಸೂಚಿಸಿದ್ದರೂ ಕೇವಲ 13 ಆಸ್ಪತ್ರೆಗಳ ಮಾತ್ರ ಹಾಜರಾಗಿದ್ದರು. ಹೀಗಾಗಿ ಗೈರು ಹಾಜರಾದ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಎಂದು ಡಿಹೆಚ್ಓ.ಶ್ರೀನಿವಾಸ್ ಅವರಿಗೆ ಸೂಚಿಸಿದರು.
ಇನ್ನು, ಖಾಸಗಿ ಆಸ್ಪತ್ರೆಗಳಲ್ಲಿನ ಬೆಡ್ಗಳ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ. ಹೀಗಾಗಿ ಆಸ್ಪತ್ರೆಗಳಿಗೆ ಖುದ್ದು ನಾನೇ ಭೇಟಿ ನೀಡಿ ಪರಿಶೀಲಿಸುತ್ತೇನೆ. ಸರ್ಕಾರ ವಿಧಿಸಿರುವ ಬಿಲ್ಗಿಂತ ಹೆಚ್ಚಿನ ಬಿಲ್ ತೆಗೆದುಕೊಂಡರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ವೈದ್ಯರೇ ಸಹಕಾರ ನೀಡದಿದ್ದರೆ ಹೇಗೆ? ತುರ್ತು ಪರಿಸ್ಥಿತಿಯಲ್ಲಿ ವೈದ್ಯರ ಸಹಕಾರ ಅತ್ಯಗತ್ಯ.
ಇಂತಹ ಸಂದರ್ಭದಲ್ಲಿ ಆಸ್ಪತ್ರೆ ಬಿಟ್ಟು ಓಡಿ ಹೋಗುವ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸಿಬ್ಬಂದಿಗೆ ಕೊರೊನಾದಿಂದ ತೊಂದರೆಯಾದರೆ ಸರ್ಕಾರದಿಂದ 50 ಲಕ್ಷ ಪರಿಹಾರ ನೀಡಲಾಗುವುದು ಎಂದರು.