ಬೆಂಗಳೂರು: ರಾಜ್ಯದ 667 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿ ಇಂದು ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಸುಬ್ಬಾರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್ ಸಂದರ್ಭದಲ್ಲಿ ಪ್ರೌಢಶಾಲೆಯನ್ನು ಪದವಿಪೂರ್ವ ಕಾಲೇಜನ್ನಾಗಿ ಮೇಲ್ದರ್ಜೆಗೇರಿಸಲು ಸಾಧ್ಯವಾಗಿರಲಿಲ್ಲ. ಆದಷ್ಟು ಬೇಗ ಆದ್ಯತೆ ಮೇಲೆ ಪ್ರೌಢಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.
361 ಸರ್ಕಾರಿ ಪ್ರೌಢಶಾಲೆಗಳನ್ನು ಸರ್ಕಾರಿ ಪದವಿಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸುವ ಪ್ರಸ್ತಾವನೆಯು ನಿರ್ದೇಶನಾಲಯದಿಂದ ಸ್ವೀಕೃತವಾಗಿದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 4 ಪ್ರೌಢಶಾಲೆಗಳು ಪದವಿಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸುವ ಪ್ರಸ್ತಾವನೆಯಲ್ಲಿ ಸೇರಿವೆ ಎಂದು ಹೇಳಿದರು.
ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳಿಂದ ಮಕ್ಕಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಆದ್ಯತೆ ಮೇಲೆ ತುರ್ತಾಗಿ ಶಾಲೆಗಳನ್ನು ದುರಸ್ತಿ ಮಾಡುತ್ತೇವೆ. ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದ ಹೆಚ್ಚು ಶಾಲೆಗಳಿಗೆ ತೊಂದರೆಯಾಗಿದೆ ಎಂದರು.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ 38 ಸರ್ಕಾರಿ ಪ್ರಾಥಮಿಕ ಶಾಲೆಗಳ 68 ಕೊಠಡಿಗಳು, ಒಂದು ಸರ್ಕಾರಿ ಪ್ರೌಢಶಾಲೆಯ 3 ಕೊಠಡಿಗಳು ದುರಸ್ತಿಯಾಗಬೇಕಿದೆ. 2022-23ನೇ ಸಾಲಿನಲ್ಲಿ 15 ಶಾಲೆಗಳ 15 ಕೊಠಡಿಗಳ ದುರಸ್ತಿಗೆ 30 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲರ ಹುದ್ದೆಗಳ ಭರ್ತಿ: ಕಾಲೇಜು ಶಿಕ್ಷಣ ಇಲಾಖೆಗೆ ಮಂಜೂರಾದ 412 ಪ್ರಾಂಶುಪಾಲರ ಹುದ್ದೆಗಳಲ್ಲಿ 310 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು, ಕಾಂಗ್ರೆಸ್ ಸದಸ್ಯ ಪಿ.ಎಂ. ನರೇಂದ್ರಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದರು.
ಪ್ರಾಂಶುಪಾಲರ ಹುದ್ದೆಯ ನೇಮಕ ಮಾಡುವ ಹೊಣೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಮಂಜೂರಾಗಿರುವ ಇನ್ನುಳಿದ 102 ಪ್ರಾಂಶುಪಾಲರ ಹುದ್ದೆಗಳು ಹಾಗೂ ಮಂಜೂರಾಗದಿರುವ 28 ಪ್ರಾಂಶುಪಾಲರ ಹುದ್ದೆಗಳನ್ನು ಮಂಜೂರು ಮಾಡಿ ಒಟ್ಟು 130 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರೂಪ್ ಬಿ ವೃಂದದಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಸರ್ಕಾರದ ಪರಿಶೀಲನೆಯಲ್ಲಿದೆ. ಕಲ್ಯಾಣ ಕರ್ನಾಟಕ ವೃಂದದ ಮೀಸಲಾತಿಗೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ಮಂಡಳಿಯಲ್ಲಿ ಮೊಕದ್ದಮೆ ದಾಖಲಾಗಿದ್ದು, ನ್ಯಾಯಾಲಯ ನೀಡುವ ಅಂತಿಮ ತೀರ್ಪಿನಂತೆ ಕ್ರಮ ವಹಿಸಲಾಗುವುದು ಎಂದು ಸಚಿವರು ವಿವರಿಸಿದರು.
ಅರೆ ವೈದ್ಯಕೀಯ ಸಿಬ್ಬಂದಿ : ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಿ ಕಾಯಕಲ್ಪ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಡಾ. ಅವಿನಾಶ್ ಉಮೇಶ್ ಜಾಧವ್ ಅವರ ಪ್ರಶ್ನೆಗೆ ಉತ್ತರಿಸಿದರು.
ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರು, ತಜ್ಞವೈದರ ಕೊರತೆ ಇರುವುದು ಗಮನಕ್ಕೆ ಬಂದಿದೆ. ಸಿಬ್ಬಂದಿ ಕೊರತೆ ನೀಗಿಸಲು ಪ್ರಾಮಾಣೀಕ ಪ್ರಯತ್ನ ಮಾಡಲಾಗುವುದು. ಈ ಸಂಬಂಧ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಲವು ಕಡೆಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡಗಳಿವೆ. ವೈದ್ಯರು ಹಾಗೂ ಇತರೆ ಸಿಬ್ಬಂದಿಗಳಿಲ್ಲ. ಅಂತಹ ಕಡೆಗಳಲ್ಲಿ ವೈದ್ಯರು, ಸಿಬ್ಬಂದಿಯನ್ನು ನೇಮಕ ಮಾಡಿ ಒಳ್ಳೆ ರೀತಿಯಲ್ಲಿ ನಿರ್ವಹಣೆ ಮಾಡುವುದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಏಳು ಹಳೆಯ ತಾಲೂಕುಗಳಲ್ಲಿ ಇರುವ ಆಸ್ಪತ್ರೆಗಳನ್ನು ನೂರು ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಬೇಕಿದೆ. ಆನಂತರ ಹೊಸ ತಾಲ್ಲೂಕುಗಳಲ್ಲಿ ಆಸ್ಪತ್ರೆ ಮಂಜೂರು ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಡುಪಿ, ಜಯನಗರ ಆಸ್ಪತ್ರೆ ಸಮಸ್ಯೆಗಳ ಬಗ್ಗೆ ಸದಸ್ಯರು ಗಮನ ಸೆಳೆದಿದ್ದಾರೆ. ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಹಲವು ಸದಸ್ಯರು ಡೈಯಾಲಿಸಿಸ್ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇನ್ನು ಒಂದೂವರೆ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳಲಿದೆ. ಏಡ್ಸ್ ರೋಗಿಗಳಿಗೆ ಪ್ರತ್ಯೇಕ ಡಯಾಲಿಸಿಸ್ ವ್ಯವಸ್ಥೆ ಕಲ್ಪಿಸಬೇಕೆಂಬ ಸಲಹೆ ಬಂದಿದ್ದು, ಅದನ್ನು ಕೂಡ ಪರಿಗಣಿಸಲಾಗುವುದು. ಒಟ್ಟಾರೆ ಸಮಸ್ಯೆಗಳನ್ನು ಬಗೆಹರಿಸಿ ಒಳ್ಳೆಯ ರೀತಿಯ ಸೌಲಭ್ಯ ದೊರೆಯುವಂತೆ ಮಾಡಲಾಗುವುದೆಂದು ಭರವಸೆ ನೀಡಿದರು.
ಕಲಬುರಗಿ ಜಿಲ್ಲೆಯ ಕಾಳಗಿಯನ್ನು ಹೊಸ ತಾಲೂಕು ಎಂದು ಘೋಷಣೆ ಮಾಡಲಾಗಿದೆ. ಅಲ್ಲಿ ಅನುದಾನದ ಲಭ್ಯತೆಗೆ ಅನುಗುಣವಾಗಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಪರಿಶೀಲಿಸಲಾಗುತ್ತಿದೆ ಎಂದರು. ವೈದ್ಯರ ಕೊರತೆ, ಆಸ್ಪತ್ರೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಹಲವು ಸದಸ್ಯರು ಪಕ್ಷಬೇಧ ಮರೆತು ಬೆಳಕು ಚೆಲ್ಲಿದರು.
ಇದನ್ನೂ ಓದಿ: ಸಭಾಪತಿಗಳ ಅಧ್ಯಕ್ಷತೆಯಲ್ಲಿ ಶಿಕ್ಷಣ ಇಲಾಖೆ ಸಭೆ ನಡೆಸಿದ್ದೇವೆ: ಮಧು ಬಂಗಾರಪ್ಪ