ಬೆಂಗಳೂರು: ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನಲ್ಲಿ ಸಂಭವಿಸಿರುವ ನೆರೆ ಹಾವಳಿಯಿಂದ ಸಂತ್ರಸ್ತರಾದವರ ನೆರವಿಗೆ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ಐದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ನಟ ಉಪೇಂದ್ರ ಭೇಟಿ ನೀಡಿದರು. ಬಿಎಸ್ವೈ ಭೇಟಿ ಮಾಡಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿ ದೇಣಿಗೆ ಸಲ್ಲಿಸಿದರು.
ನಂತರ ಮಾತನಾಡಿದ ನಟ ಉಪೇಂದ್ರ, ನೆರೆ ಸಂತ್ರಸ್ತರಿಗೆ ನೆರವು ನೀಡುವಲ್ಲಿ ನಮ್ಮ ಕೈಲಾದಷ್ಟು ಅಳಿಲು ಸೇವೆಯನ್ನು ನಾವು ಮಾಡಿದ್ದೇವೆ. ಉತ್ತರ ಕರ್ನಾಟಕ ಭಾಗದ ಜನರು ಸಂಕಷ್ಟದಲ್ಲಿದ್ದಾರೆ. ಅವರಿಗೆ ನಾವೆಲ್ಲರೂ ಸಹಾಯ ಮಾಡಬೇಕು. ಯಡಿಯೂರಪ್ಪ ಕೂಡ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ಇಂದಿನ ಭೇಟಿ ವೇಳೆ ರಾಜಕೀಯದ ಬಗ್ಗೆ ಸಿಎಂ ಜೊತೆ ಏನೂ ಚರ್ಚೆ ಮಾಡಿಲ್ಲ. ನಮ್ಮದು ರಾಜಕೀಯ ಅಲ್ಲ. ಪ್ರಜಾಕೀಯ ಎಂದು ಡೈಲಾಗ್ ಹೊಡೆದ ಉಪೇಂದ್ರ, ಉಪ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆ ಇದೆ ಎಂದರು.