ಬೆಂಗಳೂರು: ವಿವೋ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯ 3ನೇ ಪಂದ್ಯದಲ್ಲಿ ಯುಪಿ ಯೋಧಾಸ್ ತಂಡವು ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 34-32 ಅಂಕಗಳ ಅಂತರದಲ್ಲಿ ಜಯ ಗಳಿಸಿತು. ಪ್ರಥಮಾರ್ಧಲ್ಲಿ ವೈಫಲ್ಯಗೊಂಡು ಅಂಕಗಳಿಸದೆ ಅಚ್ಚರಿ ಮೂಡಿಸಿದ್ದ ಪ್ರದೀಪ್ ನರ್ವಾಲ್ ದ್ವಿತಿಯಾರ್ಧದಲ್ಲಿ ಅನುಭವದ ಆಟವಾಡಿ ಅಮೂಲ್ಯ 7 ಅಂಕಗಳನ್ನು ಗಳಿಸಿ ಗಮನ ಸೆಳೆದರು.
ವಿಜೇತ ಯುಪಿ ಯೋಧಾಸ್ ಪರ ಪ್ರದೀಪ್ ನರ್ವಾಲ್ ಹಾಗೂ ಸುರೀಂಧರ್ ಗಿಲ್ (9 ಅಂಕಗಳು) ಜಯದ ರೂವಾರಿ ಎನಿಸಿದರು. ಆಶು ಸಿಂಗ್ ಹಾಗೂ ಶುಭಂ ಕುಮಾರ್ ಸೇರಿ ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಗಳಿಸಿದರು. ಸೋತ ಪಿಂಕ್ ಪ್ಯಾಂಥರ್ಸ್ ಪರ ಅರ್ಜುನ್ ದೆಶ್ವಾಲ್ ಒಟ್ಟು 8 ರೈಡಿಂಗ್ ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಅನುಭವಿ ಆಟಗಾರ ರಾಹುಲ್ ಚೌಧರಿ ಸಂಪೂರ್ಣ ವಿಫಲರಾಗಿರುವುದು ತಂಡದ ಸೋಲಿಗೆ ಮತ್ತೊಂದು ಕಾರಣವಾಗಿತ್ತು.
ದ್ವಿತಿಯಾರ್ಧದಲ್ಲಿ ಪಂದ್ಯದ ಗತಿಯೇ ಬದಲಾಯಿತು. ಹಿನ್ನಡೆ ಕಂಡಿದ್ದ ಯುಪಿ ಯೋಧಾಸ್ ಮುನ್ನಡೆಯ ಹೆಜ್ಜೆಯಿಟ್ಟಿತು. ಸೂಪರ್ ಟ್ಯಾಕಲ್ ಮೂಲಕ ಬೃಹತ್ ಅಂತದ ಕಾಯ್ದುಕೊಂಡಿತು. 6ನೇ ರೈಡಿಂಗ್‌ನಲ್ಲಿ ಪ್ರದೀಪ್ ನರ್ವಾಲ್ ಅಂಕದ ಖಾತೆ ತೆರೆಯುವಲ್ಲಿ ಸಫಲರಾದರು. ರಾಹುಲ್ ಚೌಧರಿಯನ್ನು ಟ್ಯಾಕಲ್ ಮಾಡಿ ಪಿಂಕ್ ಪ್ಯಾಂಥರ್ಸ್‌ನ ಬಲ ಕುಂದಿಸುವಲ್ಲಿ ಯೋಧಾಸ್ ಸಫಲವಾಯಿತು. ಕೂಡಲೇ ರಾಹುಲ್ ಚೌಧರಿ ಬದಲಿಗೆ ಭವಾನಿ ರಜಪೂತ್ ಅವರನ್ನು ಅಂಗಣಕ್ಕಿಳಿಸಲಾಯಿತು. ಮೊದಲ ರೈಡಿಂಗ್‌ನಲ್ಲಿಯೇ ಮೂರು ಅಂಕಗಳೊಂದಿಗೆ ಯಶಸ್ಸು ಕಂಡ ಭವಾನಿ ತಂಡದ ಚೇತರಿಕೆಗೆ ನೆರವಾದರು.
ಯುವ ಆಟಗಾರ ಅಜಿತ್ ಮುನ್ನಡೆಗೆ ನೆರವು: ಯುವ ಆಟಗಾರ ಅಜಿತ್ ಜೈಪುರ ಪಿಂಕ್ ಪ್ಯಾಂಥರ್ಸ್‌ನ ಮುನ್ನಡೆಗೆ ನೆರವಾದರು. ಆದರೆ, ಇದು ಯುಪಿ ಯೋಧಾಸ್ ತಂಡದ ಮುನ್ನಡೆಗೆ ಅಡ್ಡಿಯಾಗಲಿಲ್ಲ. ಅತ್ಯಂತ ನಿರ್ಣಾಯಕ ಹಂತದಲ್ಲಿ ಯುಪಿ ಯೋಧಾಸ್ ಆಲೌಟ್ ಆದದ್ದು ಪಂದ್ಯ ಸಮಬಲದತ್ತ ಸಾಗುವಂತೆ ಮಾಡಿತು. ಆದರೆ, ಸರೀಂಧರ್ ಗಿಲ್ ರೈಡಿಂಗ್ ಮೂಲಕ ಎರಡು ಅಂಕಗಳನ್ನು ಗಳಿಸಿಯೋಧಾಸ್ ತಂಡಕ್ಕೆ ಮುನ್ನಡೆ ಕಲ್ಪಿಸಿದರು.
ಪ್ರಥಮಾರ್ಧದಲ್ಲಿ ಪ್ಯಾಂಥರ್ಸ್ ಪ್ರಭುತ್ವ: ಯುವ ಆಟಗಾರರ ಜವಾಬ್ದಾರಿ, ಹಿರಿಯ ಆಟಗಾರರ ಸಲಹೆ ಇವುಗಳಿಂದ ಅದ್ಭುತ ಪ್ರದರ್ಶನ ತೋರಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪ್ರಥಮಾರ್ಧದಲ್ಲಿ ಯುಪಿ ಯೋಧಾಸ್ ವಿರುದ್ಧ 15-12 ಅಂತರದಲ್ಲಿ ಮೇಲುಗೈ ಸಾಧಿಸಿತು.
ಪ್ರದೀಪ್ ನರ್ವಾಲ್ ವಿಫಲ: ಪ್ರತಿಯೊಂದು ಸೀಸನ್ನಲ್ಲೂ ಅದ್ಭುತ ಪ್ರದರ್ಶನ ತೋರಿ 1300ಕ್ಕೂ ರೈಡಿಂಗ್ ಅಂಗಳನ್ನು ಗಳಿಸಿ ಖ್ಯಾತಿ ಪಡೆದಿದ್ದ ಪ್ರದೀಪ್ ನರ್ವಾಲ್ ಈ ಬಾರಿ ಯುಪಿ ಯೋಧಾಸ್ ತಂಡದಲ್ಲಿದ್ದು, ಪ್ರಥಮಾರ್ಧದಲ್ಲಿ ತಮ್ಮ ನೈಜ ಪ್ರದರ್ಶನ ತೋರುವಲ್ಲಿ ವಿಫಲರಾದದ್ದು ಕಬಡ್ಡಿ ಪ್ರೇಕ್ಷರಿಗೆ ನಿರಾಸೆಯನ್ನುಂಟು ಮಾಡಿತು. ನಾಲ್ಕು ಪ್ರದೀಪ್ ನರ್ವಾಲ್ ರೈಡ್ ಮಾಡಿದರೂ ಅಂಕ ಎದುರಾಳಿ ತಂಡದ ಪಾಲಾಗಿತ್ತು.
ಪ್ರದೀಪ್ ನರ್ವಾಲ್ ಟ್ಯಾಕಲ್ ಮಾಡುವಲ್ಲಿ ಪ್ಯಾಂಥರ್ಸ್ ಯಶಸ್ವಿ: ತಂಡದ ಮಾಲೀಕ ನಟ ಅಭಿಷೇಕ್ ಬಚ್ಚನ್ ಸಮ್ಮುಖದಲ್ಲಿ ಅತ್ಯಂತ ಆತ್ಮವಿಶ್ವಾಸದಿಂದ ಆಡಿದ ಜೈಪುರ ಪಿಂಕ್ ಪ್ಯಾಂಥರ್ಸ್ ಮೊದಲ ರೈಡ್ ಮಾಡಿದ ಪ್ರದೀಪ್ ನರ್ವಾಲ್ ಅವರನ್ನು ಟ್ಯಾಕಲ್ ಮಾಡುವಲ್ಲಿ ಯಶಸ್ವಿಯಾಯಿತು. ಜೈಪುರ ಪಿಂಕ್ ಪ್ಯಾಂಥರ್ಸ್‌ನಲ್ಲಿದ್ದ ಹಿರಿಯ ಅನುಭವಿ ಆಟಗಾರ ರಾಹುಲ್ ಚೌಧರಿ ಕೂಡ ಗಳಿಸಿದ್ದು ಕೇವಲ 1 ಅಂಕವಾಗಿತ್ತು. ಆದರೆ, ಯುವ ನಾಯಕ ಸುನಿಲ್ ಕುಮಾರ್ ಮುಂದಾಳತ್ವದಲ್ಲಿ ಅಂಗಳಕ್ಕಿಳಿದ ತಂಡ ಉತ್ತಮ ಪ್ರದರ್ಶನ ನೀಡಿತು.
ಪಿಂಕ್ ಪ್ಯಾಂಥರ್ಸ್ ಗೆ ಬೋನಸ್ ಅಂಕ: ಯುವ ಆಟಗಾರ ಅಂಕುಶ್ ಟ್ಯಾಕಲ್‌ನಲ್ಲಿ 3 ಅಂಕಗಳನ್ನು ಗಳಿಸಿ ಕಬಡ್ಡಿಯಲ್ಲಿ ಶಕ್ತಿಯ ಜೊತೆಯಲ್ಲಿ ಕೌಶಲ್ಯವೂ ಪ್ರಮುಖ ಎಂಬುದನ್ನು ಸಾಬೀತುಪಡಿಸಿದರು. ರೈಡರ್ ಅರ್ಜುನ್ ದೆಶ್ವಾಲ್ 4 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಅಭಿಷೇಕ್ ಟ್ಯಾಕಲ್‌ನಲ್ಲಿ ಗಳಿಸಿದ 2 ಅಂಕ ಯುಪಿ ಯೋಧಾಸ್ ಪಡೆಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಯುಪಿ ಯೋಧಾಸ್ ಪಡೆಯನ್ನು ಆಲೌಟ್ ಮಾಡಿದ ಪಿಂಕ್ ಪ್ಯಾಂಥರ್ಸ್ ಬೋನಸ್ ಅಂಕದೊಂದಿಗೆ ಮುನ್ನಡೆ ಕಂಡುಕೊಂಡಿತು.
ಇದನ್ನೂ ಓದಿ: ಟಿ20 ವಿಶ್ವಕಪ್: ಜಡೇಜಾ - ಬುಮ್ರಾ ಅನುಪಸ್ಥಿತಿ.. ಹೊಸ ಚಾಂಪಿಯನ್ಗಳಿಗೆ ಅವಕಾಶ ಎಂದ ರವಿಶಾಸ್ತ್ರಿ