ಬೆಂಗಳೂರು: ರಾಜ್ಯದಲ್ಲಿಯೂ ಉತ್ತರಪ್ರದೇಶ ಮಾದರಿಯಲ್ಲಿ ಜನಸಂಖ್ಯೆ ನಿಯಂತ್ರಣ ಜಾರಿ ವಿಚಾರ ಚರ್ಚೆಯಲ್ಲಿದೆ. ಆದರೆ, ಇನ್ನು ಯಾವುದೂ ನಿಶ್ಚಯವಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಅಗತ್ಯವಿದೆ, ಸದ್ಯ ಉತ್ತರ ಪ್ರದೇಶ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸುತ್ತಿದೆ. ನಮ್ಮ ರಾಜ್ಯದಲ್ಲಿಯೂ ಉತ್ತರ ಪ್ರದೇಶ ಮಾದರಿಯಲ್ಲಿ ಜನಸಂಖ್ಯೆ ನಿಯಂತ್ರಣ ಕಾಯ್ದೆ ತರುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ ಎಂದರು.
ರಾಜ್ಯದಲ್ಲಿ ಅನ್‌ಲಾಕ್ 4.0 ಪ್ರಕ್ರಿಯೆ:
ಸದ್ಯಕ್ಕೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಕೊರೊನಾ ಸೋಂಕಿನ ಪ್ರಮಾಣ ತಿಳಿದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇರುವ ವ್ಯವಸ್ಥೆಯಲ್ಲಿ ಮತ್ತೆ ಬದಲಾವಣೆ ಮಾಡುವುದಾದರೆ ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚೆ ಮಾಡಿ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಜನರ ಜೀವ ಮತ್ತು ಜೀವನ ಎರಡು ಮುಖ್ಯ. ಈ ನಿಟ್ಟಿನಲ್ಲಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ಲಸಿಕೆ ಕೊರತೆ ಇಲ್ಲ:
ತಿಂಗಳಿಗೆ ಒಂದು ಬಾರಿ ಲಸಿಕೆ ಎಲ್ಲಾ ರಾಜ್ಯಗಳಿಗೂ ಕೇಂದ್ರದಿಂದ ಕೋವಿಡ್ ಲಸಿಕೆ ಹಂಚಿಕೆಯಾಗುತ್ತದೆ. ಅದೇ ನಿಟ್ಟಿನಲ್ಲಿ ರಾಜ್ಯಕ್ಕೂ ಲಸಿಕೆ ಹಂಚಿಕೆಯಾಗಿದೆ. ಮುಂದೆಯೂ ಇದೇ ಪ್ರಮಾಣದಲ್ಲಿ ರಾಜ್ಯದಲ್ಲಿ ಲಸಿಕೆ ಹಂಚಿಕೆಯಾಗಲಿದೆ. 60 ಲಕ್ಷದಷ್ಟು ಸಾರ್ವಜನಿಕರು ಪ್ರತಿ ತಿಂಗಳು ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆಯಲ್ಲಿ ಕೊರತೆಯಾಗಿಲ್ಲ ಎಂದು ತಿಳಿಸಿದರು.