ಬೆಂಗಳೂರು: ಸಂಸತ್ ಅಧಿವೇಶನದಲ್ಲಿ ಇಂದು ಕರ್ನಾಟಕದ ‘ಫ್ರೂಟ್ಸ್’ ತಂತ್ರಾಶ ಪ್ರತಿಧ್ವನಿಸಿತು. ಶೂನ್ಯವೇಳೆ ವಿಷಯ ಪ್ರಸ್ತಾಪಿಸಿದ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ ಕರ್ನಾಟಕದ ಫ್ರೂಟ್ಸ್ (FRUITS)ತಂತ್ರಾಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇತರ ರಾಜ್ಯದವರು ಕರ್ನಾಟಕ ಮಾಡೆಲ್ ಅನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಫ್ರೂಟ್ಸ್ ತಂತ್ರಾಶ ಅಂದರೆ ‘ಫಾರ್ಮರ್ ರಿಜಿಸ್ಟ್ರೆಷನ್ ಅಂಡ್ ಯೂನಿಫೈಡ್ ಬೆನಿಫಿಷಿಯರಿ ಇನ್ಫಾರ್ಮೆಷನ್ ಸಿಸ್ಟಂ’. ಸರ್ಕಾರಿ ಸೌಲಭ್ಯ ಪಡೆಯಲು ರೈತರ ಅನುಕೂಲಕ್ಕಾಗಿ ಸರ್ಕಾರ ಫ್ರೂಟ್ಸ್ ತಂತ್ರಾಶವನ್ನು ಅಭಿವೃದ್ಧಿ ಪಡಿಸಿದೆ. ಇ-ಆಡಳಿತ ಅಭಿವೃದ್ಧಿಗೊಳಿಸಿರುವ ಫ್ರೂಟ್ಸ್ ತಂತ್ರಾಂಶ ಇದೀಗ ಕೇಂದ್ರ ಸಚಿವ ಪಿಯೂಷ್ ಹೊಗಳಿಕೆಗೆ ಪಾತ್ರವಾಗಿದೆ.
ಏನಿದು 'ಫ್ರೂಟ್ಸ್' ತಂತ್ರಾಶ?
ಕರ್ನಾಟಕ ರಾಜ್ಯ ರೈತರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ರೈತರು ಕೃಷಿ ಅಥವಾ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು, ರೇಷ್ಮೆ, ಡೈರಿ, ಪೌಲ್ಟ್ರಿ, ಮೀನುಗಾರಿಕೆ ಮುಂತಾದ ಕೃಷಿ ಹಾಗೂ ಕೃಷಿ ಸಂಬಂಧಿತ ವಿಭಿನ್ನ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ.
ಈ ಎಲ್ಲ ಇಲಾಖೆಗಳು ವಿವಿಧ ಯೋಜನೆಯಡಿ ಪ್ರಯೋಜನಗಳನ್ನು ನೀಡಲು ರೈತರಿಂದ ಅಗತ್ಯ ಮೂಲ ದಾಖಲೆಗಳನ್ನು ಪಡೆಯುವುದು ಸಾಮಾನ್ಯ ಪರಿಪಾಠವಾಗಿದೆ. ರೈತರು ಪ್ರತಿವರ್ಷ ವಿವಿಧ ಇಲಾಖೆಗಳಿಗೆ ಒಂದೇ ರೀತಿಯ ದಾಖಲೆಗಳನ್ನು ಸಲ್ಲಿಸುತ್ತಾರೆ ಹಾಗೂ ಕೆಲವೊಮ್ಮೆ ಒಂದೇ ಇಲಾಖೆಯಲ್ಲಿ ಪ್ರತಿ ಯೋಜನೆಗೆ ಪ್ರತ್ಯೇಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಈ ಸಂಬಂಧ ಫ್ರೂಟ್ಸ್ ತಂತ್ರಾಶ ಅಳವಡಿಸಲಾಗಿದೆ.
ರೈತರ ದತ್ತಾಂಶ ಸಂಗ್ರಹಕ್ಕೆ ಫ್ರೂಟ್ಸ್
ಕೃಷಿ ಇಲಾಖೆ ಕಳೆದ ಹಲವು ವರ್ಷಗಳಿಂದ ಕೆ-ಕಿಸಾನ್ ಯೋಜನೆಯಡಿ ನಾನಾ ಸವಲತ್ತುಗಳನ್ನು ನೀಡಲು ದತ್ತಾಂಶವನ್ನು ಕಳೆದ ಮೂರು ವರ್ಷಗಳಿಂದ ಸಂಗ್ರಹಿಸುತ್ತಿತ್ತು.
ರೈತರ ವಿವರ ಸಂಗ್ರಹಣೆಯಲ್ಲಿ ನಿರೀಕ್ಷಿತ ಪ್ರಗತಿಯಾಗದ ಕಾರಣ ಇ-ಆಡಳಿತ ಇಲಾಖೆಯಿಂದ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ಏಕರೂಪವಾಗಿ ರೈತರ ದತ್ತಾಂಶವನ್ನು ಒಂದು ಬಾರಿ ಸಂಗ್ರಹಿಸಿಡಲು ಫ್ರೂಟ್ಸ್ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ರೈತರು ಪ್ರಯೋಜನಗಳನ್ನು ಪಡೆಯಲು ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸುತ್ತದೆ.
ಈ ಫ್ರೂಟ್ಸ್ ತಂತ್ರಾಂಶದ ಮೂಲಕ ಬಿತ್ತನೆ ಬೀಜ, ಕೀಟನಾಶಕ, ಸಾವಯವ ಗೊಬ್ಬರ, ಕೃಷಿ ಉಪಕರಣ, ಸಸ್ಯ ಸಂರಕ್ಷಣಾ ಉಪಕರಣಗಳನ್ನು ಸಹಾಯ ಧನದಲ್ಲಿ ಪಡೆಯಬಹುದು. ತಂತ್ರಾಂಶದಲ್ಲಿ ಹೆಸರು ನೋಂದಣಿಯಾದ ರೈತರಿಗೆ ಯೂನಿಕ್ ನಂಬರ್ ಇರುವ ಗುರುತಿನ ಸಂಖ್ಯೆ ನೀಡಲಾಗುತ್ತದೆ.
ರೈತರ ಎಲ್ಲ ಮಾಹಿತಿ ಆನ್‌ಲೈನ್‌ನಲ್ಲೇ ನೋಂದಣಿಯಾಗುತ್ತದೆ. ಯೂನಿಕ್ ನಂಬರ್ ಇದ್ದಲ್ಲಿ ಎಲ್ಲಾ ವಿವರ ಅಲ್ಲಿಯೇ ಸಿಗುತ್ತದೆ. ಇಲಾಖೆಯಿಂದ ನೀಡಿರುವ ಎಲ್ಲ ಸೌಲಭ್ಯಗಳ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಸೌಲಭ್ಯಗಳ ದುರುಪಯೋಗ ತಪ್ಪಲಿದೆ.
ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಮತ್ತು ಇತರ ಸಂಬಂಧಿಸಿದ ಇಲಾಖೆಗಳಿಂದ ದೊರೆಯುವ ಸಹಾಯಧನ ಸೌಲಭ್ಯಗಳನ್ನು ಪಡೆಯಲು ಮತ್ತು ಬೆಂಬಲ ಬೆಲೆ, ಬೆಳೆ ವಿಮೆ, ಬೆಳೆ ಸಾಲ, ಬೆಳೆ ಹಾನಿ, ಪರಿಹಾರ ಹಾಗೂ ಯೋಜನೆಗಳಿಗೆ ಫ್ರೂಟ್ಸ್ ಸಂಖ್ಯೆಯನ್ನು ಬಳಸಲಾಗುತ್ತಿದೆ.
ನೋಂದಣಿಗೆ ಬೇಕಾದ ದಾಖಲಾತಿ ಏನು?
ರೈತರು ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿ ಹಾಗೂ ಪಾಸ್‌ಪೋರ್ಟ್ ಅಳತೆಯ ಫೋಟೋ ಸಲ್ಲಿಸಬೇಕು.
ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ ಸೇರಿದಂತೆ ಸೂಕ್ತ ದಾಖಲೆ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ರೈತ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಆಧಾರ್ ಕಾರ್ಡ್, ವಾಸ ಪ್ರಮಾಣ ಪತ್ರ, ವಯಸ್ಸು ದೃಢೀಕರಣ ಪತ್ರ, ಆದಾಯ ದೃಢೀಕರಣ ಪತ್ರ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ಸಲ್ಲಿಸಬೇಕು.
ಇದನ್ನೂ ಓದಿ: ಚಾಮರಾಜನಗರ: 43 ವರ್ಷದ ಬಳಿಕ ಗುಂಡಾಲ್ ಜಲಾಶಯ ಭರ್ತಿ..ಬಾಗಿನ ಅರ್ಪಿಸಿದ ಶಾಸಕ ನರೇಂದ್ರ