ಬೆಂಗಳೂರು: ಉತ್ತರ ಕರ್ನಾಟಕದ ಭಾಗದಲ್ಲಿ ಧಾರಾಕಾರ ಮಳೆ ಸುರಿದ್ರೆ ನದಿಗಳು ತುಂಬಿ ಮತ್ತು ಅಪಾಯಮಟ್ಟ ಮೀರಿ ಹರಿಯುವ ಕಾರಣ ಇಡೀ ಗ್ರಾಮಗಳೇ ಜಲಾವೃತವಾಗುತ್ತವೆ. ಆದರೆ, ಬೆಂಗಳೂರಿನಲ್ಲಿ ಹಾಗಲ್ಲ, ಸಾಧಾರಣ ಮಳೆಯಾದ್ರೆ ಸಾಕು ಚರಂಡಿಗಳ ನೀರು ರಸ್ತೆಗಳ ಮೇಲೆ ಹರಿಯುತ್ತದೆ. ಇನ್ನು ಜೋರು ಮಳೆ ಸುರಿದ್ರೆ, ತಗ್ಗು ಪ್ರದೇಶಗಳಲ್ಲಿ ವಾಸಿಸುವವರ ಪಾಡು ಅಧೋಗತಿ. ಚರಂಡಿ, ರಾಜಕಾಲುವೆಗಳು ತುಂಬಿ ಪ್ರವಾಹ ಸೃಷ್ಟಿಯಾಗುತ್ತದೆ. ನಗರದ ಬಡಾವಣೆಗಳು ನೀರಿನಲ್ಲಿ ತೇಲುತ್ತಿರುತ್ತವೆ. ಇದರಿಂದಾಗಿ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ. ಈ ಜೀವನ ಸಾಕಪ್ಪ ಎನ್ನುವಷ್ಟರ ಮಟ್ಟಿಗೆ ಬೇಸತ್ತು ಹೋಗಿದ್ದಾರೆ.
ದಾಸರಹಳ್ಳಿ, ಹುಳಿಮಾವು, ದಿನ್ನೂರು ರಸ್ತೆ, ಬನಶಂಕರಿ, ಹೆಬ್ಬಾಳ, ಶಾಂತಿನಗರ, ಕೋರಮಂಗಲ, ಶಿವಾಜಿನಗರ, ಮೆಜೆಸ್ಟಿಕ್, ಮಲ್ಲೇಶ್ವರಂ, ಯಲಹಂಕ, ಸಿಲ್ಕ್ಬೋರ್ಡ್, ಜಯನಗರದಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ಅಂಡರ್ಪಾಸ್ಗಳಲ್ಲಿ ವಾಹನ ಸವಾರರ ಪಾಡು ಘೋರಾತಿಘೋರ. ಇದನ್ನು ನೋಡಿದ್ರೆ, ಮಳೆಗಾಲ ಎದುರಿಸಲು ಬಿಬಿಎಂಪಿ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಇನ್ನು ವಿಜಯಪುರ ಜಿಲ್ಲೆಯ ವಿಷಯಕ್ಕೆ ಬಂದ್ರೆ ಭಾರಿ ಮಳೆಯಿಂದ ರಸ್ತೆಗಳು ಸಂಪೂರ್ಣ ಕಿತ್ತು ಹೋಗಿವೆ. ಸ್ವಲ್ಪ ಮಳೆಯಾದ್ರೆ ಸಾಕು ರಸ್ತೆ ತುಂಬೆಲ್ಲಾ ನೀರಿರುತ್ತದೆ. ಸಾರ್ವಜನಿಕರು ರಸ್ತೆ ಅಭಿವೃದ್ಧಿಪಡಿಸಿ ಎಂದು ದಶಕದಿಂದ ಗೋಗರೆದರೂ ಪಾಲಿಕೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎನ್ನಲಾಗಿದೆ. ನಗರ ಬಸ್ ನಿಲ್ದಾಣದ ಜೊತೆಗೆ ಮನಗೂಳಿ ಅಗಸಿ, ಬಸ್ ನಿಲ್ದಾಣ ಹಿಂಬದಿ ರಸ್ತೆ, ಮೀನಾಕ್ಷಿ ಚೌಕ್, ಎಸ್.ಎಸ್.ರಸ್ತೆ, ಗಣಪತಿ ಚೌಕ್, ಆದರ್ಶನಗರ, ಬಂಜಾರ ಕಾಲೊನಿ, ಸಿದ್ದೇಶ್ವರ ರಸ್ತೆ ಸೇರಿದಂತೆ ಹೊರ ವಲಯದ ರಸ್ತೆಗಳ ಕತೆ ಹೇಳೋದೇ ಬೇಡ ಬಿಡಿ.
ಉತ್ತರ ಕರ್ನಾಟಕ ಭಾಗದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಕುಂದಾನಗರಿ ಬೆಳಗಾವಿ ಕೂಡ ಒಂದು. ಕೇಂದ್ರದ ಸ್ಮಾರ್ಟ್‍ಸಿಟಿ ಹಾಗೂ ಅಮೃತ್ ಸಿಟಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದು, ಕೋಟ್ಯಂತರ ರೂಪಾಯಿ ಅನುದಾನ ಹರಿದುಬರ್ತಿದೆ. ನಗರ ಅಭಿವೃದ್ಧಿಯೇನೋ ಆಗುತ್ತಿದೆ. ಆದರೆ, ತಗ್ಗು ಪ್ರದೇಶಗಳಿಗೆ ಕನಿಷ್ಠ ಮೂಲಸೌಕರ್ಯ ಒದಗಿಸದ ಕಾರಣ ನಿವಾಸಿಗಳು ಮಳೆಗಾಲದಲ್ಲಿ ನೀರಲ್ಲೇ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಪಾಲಿಕೆಯ ಬೇಜವಾಬ್ದಾರಿ ಬೇಸತ್ತಿರುವ ಜನ್ರು, ಹಿಡಿಶಾಪ ಹಾಕುತ್ತಿದ್ದಾರೆ.
ನಗರದ ರಸ್ತೆಗಳಲ್ಲಿ ಮಳೆ ನೀರು ನಿಲ್ಲಬಾರದು ಎಂದು ಅಲ್ಲಲ್ಲಿ ನೀರು ಸರಾಗವಾಗಿ ಹೋಗಲು ಒಂದು ಕಡೆ ವ್ಯವಸ್ಥೆ ಮಾಡಿದ್ರೆ ಮತ್ತೊಂದು ಕಡೆ ಏನನ್ನೂ ಮಾಡಿರುವುದಿಲ್ಲ. ಚರಂಡಿ, ಕಾಜಕಾಲುವೆಗಳ ಅಭಿವೃದ್ಧಿಗೆ ಸರ್ಕಾರ ಕೋಟಿ, ಕೋಟಿ ಸುರಿದರೂ ಅಭಿವೃದ್ಧಿ ಮಾತ್ರ ಹೇಳಿಕೊಳ್ಳುವಷ್ಟಿಲ್ಲ. ಅಧಿಕಾರಕ್ಕೆ ಜನಪ್ರತಿನಿಧಿಗಳು ಮಾತೆತ್ತಿದರೆ ಅದು ಮಾಡ್ತೇವೆ, ಇದು ಮಾಡ್ತೇವೆ ಎಂದು ಬೊಬ್ಬೆ ಹೊಡೆಯುತ್ತಾರೆ. ಅಧಿಕಾರಕ್ಕೆ ಬಂದ ನಂತ್ರ ಅದಕ್ಕೂ ನಮಗು ಸಂಬಂಧವೇ ಇಲ್ಲ ಎಂಬಂತೆ ಇರುತ್ತಾರೆ. ಬಿಡುಗಡೆಯಾಗುವ ಅನುದಾನ ಏನಾಗ್ತಿದೆ. ಸರಿಯಾಗಿ ಅಭಿವೃದ್ಧಿ ಕೈಗೊಂಡಿದ್ರೆ ಮಳೆಗಾಲದಲ್ಲಿ ನಮ್ಮ ಪಾಡು ಹಿಗ್ಯಾಕೆ ಇರ್ತಿತ್ತು ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.