ಬೆಂಗಳೂರು: ಇಂದು ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ. ಸಿಲಿಕಾನ್ ಸಿಟಿಯಲ್ಲಿಯೂ ಕೂಡ ಸಂಭ್ರಮ ಸಡಗರದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇನ್ನು ಮೆಟ್ರೋ ಮಂದಿ ಹಬ್ಬದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು.
ಯುಗಾದಿ... ಹೆಸರೇ ಹೇಳುವಂತೆ ಹೊಸ ಯುಗದ ಆದಿ. ಮತ್ತೊಂದು ಸಂವತ್ಸರದ ಆರಂಭ. ಅಲ್ಲದೇ ಪ್ರಕೃತಿಯು ಹಳೆ ತೊಗಲನ್ನು ಕಳೆದುಕೊಂಡು ಹೊಸತನ್ನು ಹೊದ್ದುಕೊಳ್ಳುವಂತಹ ಸಂದರ್ಭ. ಹೀಗಾಗಿ ಈ ಯುಗಾದಿ ಹಬ್ಬಕ್ಕೆ ನಾಡಿನಾದ್ಯಂತ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ರಾಜ್ಯದ ಒಂದೊಂದು ಭಾಗಗಳಲ್ಲಿಯೂ ಒಂದೊಂದು ರೀತಿಯಲ್ಲಿ ಈ ಹಬ್ಬವನ್ನು ಆಚರಿಲಾಗುತ್ತೆ. ಇನ್ನು ಸಿಲಿಕಾನ್ ಸಿಟಿಯಲ್ಲಿ ಕೂಡ ಈ ವಿಶೇಷ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಬರಮಾಡಿಕೊಳ್ಳಲಾಯ್ತು.
ಹಬ್ಬದ ಹಿನ್ನೆಲೆಯಲ್ಲಿ ನಗರಾದ್ಯಂತ ಮೆಟ್ರೋ ಮಂದಿ ದೇವಸ್ಥಾನಗಳಿಗೆ ತೆರಳುವ ಮೂಲಕ ವಿಶೇಷ ಪೂಜೆ ಸಲ್ಲಿಸಿದ್ರು. ಇನ್ನು ಯುಗಾದಿ ಅಂದರೆ ತಕ್ಷಣ ನೆನಪಾಗೋದು ಪ್ರಸಿದ್ಧ ದೇವಸ್ಥಾನ ಬುಲ್ಟೆಂಪಲ್ ನಲ್ಲಿರುವ ದೊಡ್ಡ ಗಣಪತಿ ದೇವಸ್ಥಾನ. ಅಲ್ಲೂ ವಿಶೇಷ ಅಭಿಷೇಕ, ಪೂಜೆ ಪುರಸ್ಕಾರ ನೆರವೇರಿಸಲಾಯಿತು. ಯುಗಾದಿಯನ್ನು ಹಿಂದೂಗಳ ಹೊಸವರ್ಷವೆಂದು ಆಚರಿಸಲಾಗುತ್ತದೆ. ಈ ಯುಗಾದಿಯನ್ನು ದಕ್ಷಿಣ ಕರ್ನಾಟಕದಲ್ಲಿ ಚಾಂದ್ರಮಾನ ಯುಗಾದಿ ಎಂದು ಆಚರಿಸಲಾಗುತ್ತೆ ಅಂತಾರೆ ಅರ್ಚಕರಾದ ಗುರುರಾಜ್.
ಇನ್ನು ನಗರದ ಇತರೆ, ಇತಿಹಾಸ ಪ್ರಸಿದ್ಧ ಕಾಡು ಮಲ್ಲೇಶ್ವರ, ಗವಿ ಗಂಗಾಧೇಶ್ವರ ಸೇರಿದಂತೆ ನಾನಾ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.