ಬೆಂಗಳೂರು : ಜನರಿಂದ ಹಣ ಪಡೆದು ಯಾವುದೇ ಸ್ವ್ಯಾಬ್ ಟೆಸ್ಟ್ ಪಡೆಯದೇ ಕೊರೊನಾ ನೆಗೆಟಿವ್ ವರದಿ ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿಯ ವಿಶೇಷ ದಳ ಅಧಿಕಾರಿಗಳು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಮುಕೇಶ್ ಸಿಂಗ್, ಸ್ಥಳೀಯ ನಿವಾಸಿ ನಾಗರಾಜ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಎರಡು ಫೋನ್ ಹಾಗೂ ಐದು ನೆಗೆಟಿವ್ ಇರುವ ಆರ್ಟಿಪಿಸಿಆರ್ ವರದಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ದೊಮ್ಮಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ನೆಗೆಟಿವ್ ವರದಿ ಬೇಕಾದವರಿಂದ 700 ರೂ. ಹಣ ಪಡೆಯುತ್ತಿದ್ದರು. ಹಣ ಪಡೆದವರಿಂದ ಯಾವುದೇ ರೀತಿ ಸ್ವ್ಯಾಬ್ ಸಂಗ್ರಹಿಸುತ್ತಿರಲಿಲ್ಲ. ಆರ್ಟಿಪಿಸಿಆರ್ ನೆಗೆಟಿವ್ ಎಂದು ವರದಿ ನೀಡುತ್ತಿದ್ದರು.
ಆಧಾರ್ ಕಾರ್ಡ್ ಹಾಗೂ ಹಣ ಪಡೆದು ನೆಗೆಟಿವ್ ವರದಿ ನೀಡುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಲೆಗೆ ಬೀಳಿಸಿದೆ.
ಈ ಕೃತ್ಯದಲ್ಲಿ ಇನ್ನಿತರರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ. ಸದ್ಯ ಇಬ್ಬರು ಆರೋಪಿಗಳನ್ನು ವರ್ತೂರು ಪೊಲೀಸರಿಗೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ.