ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಜೆಯ ವೇಳೆಗೆ ಮತ್ತೆರಡು ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ವಾರ್ಡ್ ನಂ. 61ರ ಡಿ.ಜೆ. ಹಳ್ಳಿಯ ಎಸ್. ಕೆ. ಗಾರ್ಡನ್ ಕೊಳೆಗೇರಿ ನಿವಾಸಿಯಾಗಿರುವ 38 ವರ್ಷದ ಮಹಿಳೆ (ಪಿ-2180) ತೀವ್ರ ಉಸಿರಾಟದ ಸಮಸ್ಯೆಯಿಂದ ಬೌರಿಂಗ್ಗೆ ದಾಖಲಾಗಿದ್ದರು. ಈ ವೇಳೆ ಟೆಸ್ಟ್ ನಡೆಸಲಾಗಿದ್ದು, ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಆಕೆಯನ್ನು ವಿಕ್ಟೋರಿಯಾಗೆ ದಾಖಲಿಸಲಾಗಿದೆ.
ಕೊಳೆಗೇರಿಯಲ್ಲಿ ವಾಸಿಸುತ್ತಿದ್ದರಿಂದ ಬಹುತೇಕ ಜನರಿಗೆ ಕೊರೊನಾ ಹರಡಿರುವ ಸಾಧ್ಯತೆಯಿದೆ. ಬರೋಬ್ಬರಿ 35 ಜನರನ್ನು ಪ್ರಥಮ ಸಂಪರ್ಕಿತರೆಂದು ಕ್ವಾರಂಟೈನ್ ಮಾಡಲಾಗಿದ್ದು, ದ್ವಿತೀಯ ಸಂಪರ್ಕಿತರನ್ನು ಇನ್ನೂ ಪತ್ತೆ ಹಚ್ಚಲಾಗುತ್ತಿದೆ ಎಂದು ಪೂರ್ವವಿಭಾಗದ ಆರೋಗ್ಯಾಧಿಕಾರಿ ಡಾ. ಸಿದ್ದಪ್ಪಾಜಿ ತಿಳಿಸಿದ್ದಾರೆ.
ಯಾರ ಸಂಪರ್ಕದಿಂದ ಕೊರೊನಾ ಬಂದಿದೆ ಎನ್ನುವುದು ಪತ್ತೆ ಆಗುತ್ತಿಲ್ಲ. ಈ ರೀತಿಯ ಪ್ರಕರಣ ಪೂರ್ವ ವಲಯದಲ್ಲಿ ಇದು ಮೂರನೇಯದ್ದಾಗಿದೆ. ಬಹಳಷ್ಟು ಜನ ಕೊರೊನಾ ಪಾಸಿಟಿವ್ ಇರುವ ಸಾಧ್ಯತೆಯಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಈ ರೀತಿ ಸೋಂಕಿನ ಲಕ್ಷಣದಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದರು.
ಬೆಂಗಳೂರಿನ ಪೂರ್ವ ವಿಭಾಗದಲ್ಲಿ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇನ್ನೊಂದು ಕೊರೊನಾ ಪ್ರಕರಣ ಪಾಸಿಟಿವ್ ಬಂದಿದ್ದು, ಲಕ್ಕಸಂದ್ರದಲ್ಲಿ ವಾಸಿಸುತ್ತಿದ್ದ ಕ್ಯಾನ್ಸರ್ ರೋಗಿಯ ಪತಿಗೂ ಹರಡಿದೆ. ಎರಡು ದಿನದ ಹಿಂದೆ ಪಿ -1,659ಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರ ಪ್ರಾಥಮಿಕ ಸಂಪರ್ಕದ ಪತಿಗೂ (ಪಿ-2177) ಸೋಂಕು ಇರುವುದು ದೃಢಪಟ್ಟಿದೆ.