ಬೆಂಗಳೂರು: ನಾಳೆಯಿಂದ ಎರಡು ತಿಂಗಳ ಮುಂಗಡ ಪಡಿತರ ವಿತರಣೆ ಕಾರ್ಯ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಆಹಾರ ಇಲಾಖೆ ಸಕಲ ಸಿದ್ಧತೆ ಮಾಡಿದ್ದು, ಸುಮಾರು 1,27,01,947 ಪಡಿತರ ಚೀಟಿದಾರರಿಗೆ ಉಚಿತ ಮುಂಗಡ ಪಡಿತರ ವಿತರಣೆ ನಡೆಯಲಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಈ ಸಂಬಂಧ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದ್ದು, ನಾಳೆಯಿಂದ ರಾಜ್ಯದ ಎಲ್ಲ ಪಡಿತರ ಅಂಗಡಿಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಒಮ್ಮೆಗೆ ನೀಡಲಾಗುತ್ತದೆ. ಆ ಮೂಲಕ 10,937,51 ಅಂತ್ಯೋದಯ ಪಡಿತರ ಚೀಟಿದಾರರಿಗೆ ಎರಡು ತಿಂಗಳ ಮುಂಗಡ 70 ಕೆ.ಜಿ. ಅಕ್ಕಿ ಮತ್ತು ಬಿಪಿಎಲ್ನ 3,83,64,923 ಸದಸ್ಯರಿಗೆ ಎರಡು ತಿಂಗಳ ಮುಂಗಡ 10 ಕೆ.ಜಿ ಅಕ್ಕಿ ಹಾಗೂ 4 ಕೆ.ಜಿ. ಗೋಧಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.
ಇನ್ನು ಎಪಿಎಲ್ ಕಾರ್ಡ್ ಹೊಂದಿದವರಿಗೆ 10 ಕೆಜಿ ಅಕ್ಕಿ ಒಬ್ಬ ಸದಸ್ಯರ ಪಡಿತರ ಚೀಟಿಗೆ ಹಾಗೂ 20 ಕೆಜಿ ಅಕ್ಕಿಯನ್ನು ಒಬ್ಬರಿಗಿಂತ ಹೆಚ್ಚು ಸದಸ್ಯರ ಪಡಿತರ ಚೀಟಿಗೆ ಪ್ರತಿ ಕೆಜಿ 15 ರೂ.ನಂತೆ ವಿತರಿಸಲಾಗುತ್ತದೆ.
ಏಪ್ರಿಲ್ 10ರ ಒಳಗೆ ಎಲ್ಲ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ದಾರರಿಗೆ ಎರಡು ತಿಂಗಳ ಮುಂಗಡ ಪಡಿತರವನ್ನು ನೀಡಲು ಯೋಜಿಸಲಾಗಿದೆ. ಏಪ್ರಿಲ್ 15 ರ ಬಳಿಕ ಕೇಂದ್ರ ಸರ್ಕಾರದ ಉಚಿತ ಪಡಿತರ ವಿತರಿಸಲು ಇದೇ ವೇಳೆ ನಿರ್ಧರಿಸಲಾಗಿದೆ.