ಬೆಂಗಳೂರು: ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹವಾಲಾ ದಂಧೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಆಗ್ನೇಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾವರೆಕೆರೆ ಮುಖ್ಯ ರಸ್ತೆ ಬಳಿಯ ಎಸ್ಬಿಐ ಬ್ಯಾಂಕ್ ಎಟಿಎಂ ಮುಂಭಾಗ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದರು. ಹೀಗಾಗಿ ಆರೋಪಿಗಳನ್ನು ಹಿಡಿದು ಪರಿಶೀಲನೆ ಮಾಡಿದಾಗ ಯಾವುದೇ ದಾಖಲಾತಿ ಇಲ್ಲದೇ 27,17,670 ರೂ. ಹಣವನ್ನು ಇಟ್ಟುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ಈ ಸಂಬಂಧ ಮೊಹಮ್ಮದ್ ನಿಹಾಲ್, ಅನ್ವರ್ ಕೆ.ಕೆ.ಅಬ್ದುಲ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮೂಲತಃ ಕೇರಳ ರಾಜ್ಯದವರೆಂಬ ವಿಚಾರ ಗೊತ್ತಾಗಿದೆ. ಆದರೆ ವಿಚಾರಣೆ ವೇಳೆಯಲ್ಲಿ ಹಣದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆರೋಪಿಗಳು ಈ ಹಣವನ್ನ ಹವಾಲಾ ದಂಧೆಗೆ ಉಪಯೋಗಿಸುತ್ತಿದ್ದರು ಎನ್ನಲಾಗಿದ್ದು, ತನಿಖೆ ಮುಂದುವರೆದಿದೆ.