ಬೆಂಗಳೂರು: ಕೆಲಸ ಸರಿ ಮಾಡಲ್ಲ ಎಂದು ನಿಂದಿಸುತ್ತಿದ್ದ ಲಾರಿ ಬ್ರೋಕರ್ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಆರ್‌ಎಂಸಿ ಯಾರ್ಡ್ನಲ್ಲಿ ಲಾರಿ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಎಂಬುವರನ್ನು ಕೊಲೆಗೈದ ಆರೋಪದಡಿ ಗಿರೀಶ್ ಹಾಗೂ ಸಿದ್ದೋಜಿ ಎಂಬಿಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ತಡರಾತ್ರಿ ಗೊರಗುಂಟೆಪಾಳ್ಯದ ಸಾಂಪ್ಲಮ್ಮ ದೇವಸ್ಥಾನ ಬಳಿ ಘಟನೆ ನಡೆದಿತ್ತು.
ಆರೋಪಿಗಳು ಎಪಿಎಂಸಿ ಯಾರ್ಡ್ ಮಾರ್ಕೆಟ್ನಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಶಿವಕುಮಾರ್ಗೆ ಆರೋಪಿಗಳಿಬ್ಬರ ಪರಿಚಯವಿತ್ತು. ಈ ಮಧ್ಯೆ ನೀವಿಬ್ಬರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಲಾರಿ ಬ್ರೋಕರ್ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡು ನಿನ್ನೆ ಗೊರಗುಂಟೆಪಾಳ್ಯದಲ್ಲಿ ಶಿವಕುಮಾರ್ ಜೊತೆ ಜಗಳ ಮಾಡಿದ್ದಾರೆ. ಗಲಾಟೆ ತಾರಕಕ್ಕೇರುತ್ತಿದ್ದಂತೆ ಸ್ಥಳದಲ್ಲಿದ್ದ ಕಲ್ಲನ್ನು ಶಿವಕುಮಾರ್ ತಲೆ ಮೇಲೆ ಎತ್ತಿಹಾಕಿ ಸ್ಥಳದಿಂದ ಪರಾರಿಯಾಗಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: ಐದು ವರ್ಷಗಳ ಪ್ರೀತಿ, ಮದುವೆ ನಿರಾಕರಿಸಿದ ಯುವತಿ.. 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದ ಪಾಗಲ್ ಪ್ರೇಮಿ
ಚಿಂದಿ ಆಯುವವರ ಮಧ್ಯೆ ಗಲಾಟೆ: ಚಿಂದಿ ಆಯುವವರ ಮಧ್ಯೆ ನಡೆದ ಗಲಾಟೆಯಲ್ಲಿ ಓರ್ವನ ಹತ್ಯೆ ಮಾಡಲಾಗಿದ್ದು, ಮೂವರು ಗಾಯಗೊಂಡಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಪಾಲಿಗಲ್ಲಿಯಲ್ಲಿ ನಡೆದಿದೆ. 33 ವರ್ಷದ ಸಂದೀಪ್ ಮೃತನೆಂದು ಗುರುತಿಸಲಾಗಿದೆ. ರವಿ, ಶಂಕರ್ ಹಾಗೂ ಕೆಂಚ ಎಂಬುವರು ಗಾಯಗೊಂಡಿದ್ದಾರೆ. ಕೃತ್ಯವೆಸಗಿದ ಬಿಹಾರ ಮೂಲದ ಮೊಹಮ್ಮದ್ ತೆರಿಸಾ ಎಂಬಾತನನ್ನು ಬಂಧಿಸಲಾಗಿದೆ.
ಮಾರ್ಚ್ 1ರ ರಾತ್ರಿ 3.30ರ ವೇಳೆಗೆ ಮೆಜೆಸ್ಟಿಕ್ನ ಕಪಾಲಿಗಲ್ಲಿ ಬಳಿ ಘಟನೆ ನಡೆದಿದೆ. ಆರೋಪಿ ಹಾಗೂ ಗಾಯಗೊಂಡಿರುವ ಯುವಕರೆಲ್ಲರೂ ಚಿಂದಿ ಆಯ್ದು ಜೀವನ ನಡೆಸುತ್ತಿದ್ದರು. ಮೊನ್ನೆ ರಾತ್ರಿ ಮಲಗಿದ್ದಾಗ ಆರೋಪಿ ಮೊಹಮ್ಮದ್, ಯುವಕರು ಮಲಗುವ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಸಂದೀಪ್ ಸೇರಿ ನಾಲ್ವರು ಮೊಹಮ್ಮದ್ನನ್ನು ಥಳಿಸಿ ಕಳುಹಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮೊಹಮ್ಮದ್ ಮುಂಜಾನೆ 3 ಗಂಟೆ ವೇಳೆಗೆ ಬಂದು ಮರದ ದಿಂಬಿನಿಂದ ಮನಬಂದಂತೆ ಥಳಿಸಿದ್ದಾನೆ. ಘಟನೆಯಲ್ಲಿ ಗಾಯಗೊಂಡಿದ್ದ ಸಂದೀಪ್ ಸಾವನ್ನಪ್ಪಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಯುವತಿ ಬರ್ಬರ ಹತ್ಯೆ: ಹುಚ್ಚು ಪ್ರೇಮಿಯೊಬ್ಬ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ ಯುವತಿಯನ್ನು ಚಾಕುವಿನಿಂದ ಹತ್ಯೆ ಮಾಡಿ, ಬಳಿಕ ಶವದ ಪಕ್ಕದಲ್ಲೇ ಕುಳಿತು ಕಣ್ಣೀರಿಟ್ಟ ಘಟನೆ ಇತ್ತೀಚೆಗೆ ಬೆಂಗಳೂರಿನ ಜೀವನಭೀಮಾ ನಗರ ಠಾಣೆ ವ್ಯಾಪ್ತಿಯ ವಿಂಡ್ ಟನಲ್ ರಸ್ತೆಯಲ್ಲಿ ನಡೆದತ್ತು. ಲೀಲಾ ಪವಿತ್ರ (28) ಎಂಬಾಕೆ ಕೊಲೆಯಾಗಿದ್ದರು. ದಿವಾಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಯುವತಿ ಹಾಗೂ ಆರೋಪಿ ಆಂಧ್ರಪ್ರದೇಶ ಮೂಲದವರಾಗಿದ್ದಾರೆ.