ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಎರಡು ಪ್ರಮುಖ ರಾಜಕೀಯ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಪಿಎಫ್ಐ ನಿಷೇಧ ಸ್ವಾಗತಿಸುವ ಸರ್ವಾನುಮತದ ನಿರ್ಣಯದ ಜೊತೆಗೆ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಗೆ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ಕಾರ್ಯಕಾರಿಣಿ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ ಮಹೇಶ್, ಇಂದಿನ ಕಾರ್ಯಕಾರಿಣಿಯಲ್ಲಿ ಎರಡು ರಾಜಕೀಯ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಮೊದಲನೇ ನಿರ್ಣಯವನ್ನು ಸಚಿವ ಸುನೀಲ್ ಕುಮಾರ್ ಮಂಡಿಸಿದ್ದು, ಶಾಸಕರಾದ ರಾಜ್ ಕುಮಾರ್ ತೇಲ್ಕರ್ ಹಾಗೂ ಪ್ರಾಣೇಶ್ ಅನುಮೋದಿಸಿದರು.
ಪಿಎಫ್ಐ ನಿಷೇಧ ಮಾಡಿದ ಕೇಂದ್ರದ ಕ್ರಮಕ್ಕೆ ಸಭೆಯಲ್ಲಿ ಒಕ್ಕೊರಲಿನಿಂದ ಶ್ಲಾಘನೆ ಮಾಡಲಾಯಿತು. ರಾಷ್ಟ್ರ ವಿರೋಧಿ ಶಕ್ತಿ ಧಮನ ಮಾಡಲು ಕೈಗೊಂಡ ದೃಢ ಕ್ರಮವನ್ನು ಶ್ಲಾಘಿಸಿ ಅಭಿನಂದನೆ ಸಹ ಸಲ್ಲಿಸಲಾಯಿತು ಎಂದರು.
ಕೋವಿಡ್ ವೇಳೆ ದೇಶದ ಜನರ ಬದುಕು ಹಸನು ಮಾಡಲು ಅನೇಕ ಉಪಕ್ರಮ ಕೈಗೊಂಡಿದೆ. ಇದರ ಬಗ್ಗೆ ಮೊದಲ ನಿರ್ಣಯದಲ್ಲಿ ಉಲ್ಲೇಖ ಮಾಡಿದ್ದು, ಒಟ್ಟು ಕೇಂದ್ರ ಸರ್ಕಾರ ಕೊಟ್ಟ ಕಾರ್ಯಕ್ರಮದ ಮೂಲಕ ಜನರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಲಾಯಿತು.
ಜಗತ್ತು ಆರ್ಥಿಕ ಸಂಕಷ್ಟದ ಕಾಲದಲ್ಲಿದಾಗಲೂ ಭಾರತದ ಆರ್ಥಿಕ ಸ್ಥಿತಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಉಪಕ್ರಮಕ್ಕೆ ಅಭಿನಂದನೆ ಸಲ್ಲಿಸಲಾಯಿತು. 2025 ರೊಳಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ, 2030 ರೊಳಗೆ 30 ಟ್ರಿಲಿಯನ್ ಆರ್ಥಿಕತೆ ಹೊಂದುವ ಗುರಿ ಇರಿಸಿಕೊಂಡಿದ್ದು, ಇದನ್ನು ಮೊದಲ ನಿರ್ಣಯದಲ್ಲಿ ಪ್ರಸ್ತಾಪಿಸಿ ಮಂಡಿಸಿ ಕೇಂದ್ರ ಮತ್ತು ರಾಜ್ಯಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಎರಡನೇ ನಿರ್ಣಯವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಮಂಡನೆ ಮಾಡಿದ್ದು, ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಸಚಿವ ಎನ್ ಮಹೇಶ್ ಅನುಮೋದಿಸಿದರು. ಸಭೆ ಒಕ್ಕೊರಲಿನಿಂದ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯ ಖಂಡನಾ ನಿರ್ಣಯ ಸ್ವಾಗತ ಮಾಡಿತು.
ಸದ್ಯ ಕಾಂಗ್ರೆಸ್ನಿಂದ ಭಾರತ್ ಜೋಡೋ ರಾಜಕೀಯ ಪ್ರಹಸನ ನಡೆಯುತ್ತಿದೆ. ಮತ ಬ್ಯಾಂಕ್ಗಾಗಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿತ್ತು. ದೇಶವನ್ನು ವಿಭಜಿಸಿದವರು ಈಗ ಭಾರತ ಜೋಡಿಸಲು ಹೊರಟಿದ್ದಾರೆ. ಕಾಂಗ್ರೆಸ್ನ ಈ ಅಪಹಾಸ್ಯ, ನಾಟಕವನ್ನು ಸರ್ವಾನುಮತದಿಂದ ಖಂಡಿಸಿತು. ಕಾಂಗ್ರೆಸ್ ತುಷ್ಟೀಕರಣದ ರಾಜಕೀಯ ಮಾಡುತ್ತಿದೆ.
ರಾಜ್ಯದಲ್ಲಿನ ಅವರ ಯಾತ್ರೆ ಮೂಲಕ ಜನರಿಗೆ ಎಲ್ಲ ಮನವರಿಕಯಾಗಿದೆ. ಭಾರತ ಜೋಡೋ ಬದಲು ಬದಲಾದ ಭಾರತ ನೋಡು ಎನ್ನುವ ಅವಕಾಶ ಅವರಿಗೆ ಒದಗಿಸಲಾಗಿದೆ ಎಂದರು. ಸಿದ್ದರಾಮಯ್ಯ ಕಾಲದಲ್ಲಿ ಭ್ರಷ್ಟಾಚಾರ ನಡೆದಿದೆ. ಡಿನೋಟಿಫಿಕೇಷನ್ಗೆ ಹೊಸ ನಾಮಕರಣ ಮಾಡಿದವರೇ ಸಿದ್ದರಾಮಯ್ಯ. ರಿಡು ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ.
ಅವರ ಮೇಲಿದ್ದ 108 ಪ್ರಕರಣದಲ್ಲಿ 58 ಕೇಸ್ಗೆ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದರು, ಲೋಕಾಯುಕ್ತ ದುರ್ಬಲ ಮಾಡಿ ಬಿ ರಿಪೋರ್ಟ್ ಹಾಕಿಸಿಕೊಂಡರು. ಅವರಿಗೆ ತಾಕತ್ತು, ದಮ್ಮಿದ್ದರೆ ತಮ್ಮಲ್ಲಿನ ದಾಖಲೆಗಳನ್ನು ಯಾವುದಾದರೂ ತನಿಖಾ ಸಂಸ್ಥೆಗೆ ನೀಡಬೇಕು, ಅದನ್ನು ಬಿಟ್ಟು ಸುಮ್ನನೆ 40 ಪರ್ಸೆಂಟ್ ಆರೋಪ ಮಾಡುವುದು ಸರಿಯಲ್ಲ ಎಂದರು.
ಹಿಜಾಬ್ ಹೋರಾಟದಲ್ಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿದ್ದ ಹೋರಾಟಗಾರ್ತಿಯರ ವಿಚಾರದಲ್ಲಿ ದ್ವಿಮುಖ ನೀತಿ ಅನುಸರಿಸಿದ್ದರು. ಗಾಂಧಿ ಕುಟುಂಬದ ಹೆಸರಿನಲ್ಲಿ ಈಗ ಅವರೆಲ್ಲ ಪ್ರಹಸನ ಮಾಡುತ್ತಿದ್ದಾರೆ ಎನ್ನುವುದನ್ನು ಈ ನಿರ್ಣಯದಲ್ಲಿ ಪ್ರಸ್ತಾಪಿಸಲಾಯಿತು. ಸಶಕ್ತ ಭಾರತಕ್ಕೆ ಸಮೃದ್ಧ ಕರ್ನಾಟಕದ ರೂಪದಲ್ಲಿ ಕೊಡುಗೆ ಕೊಡಲು ಹಗಲಿರುಳು ದುಡಿಯುವ ನಿರ್ಣಯ ಸಹ ಕೈಗೊಳ್ಳಲಾಯಿತು ಎಂದರು.
ಇದನ್ನೂ ಓದಿ: ಪಿರಾನ್ ಕಲಿಯಾರ್ ಉರುಸ್ನಲ್ಲಿ ಭಾಗವಹಿಸಲು ರೂರ್ಕಿಗೆ ಬಂದ 150 ಪಾಕಿಸ್ತಾನಿ ಭಕ್ತರು