ಬೆಂಗಳೂರು: ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗನಹಳ್ಳಿಯಲ್ಲಿ ಸಂಭವಿಸಿದ ವಿದ್ಯುತ್ ಪರಿವರ್ತಕ ಸ್ಫೋಟ ಪ್ರಕರಣ ಸಂಬಂಧ ನಿರ್ಲಕ್ಷ್ಯತನ ತೋರಿದ ಆರೋಪದಡಿ ಇಬ್ಬರು ಬೆಸ್ಕಾಂ ಇಂಜಿನಿಯರ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ತಂದೆ, ಮಗಳು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
ಬೆಸ್ಕಾಂನ ಸಹಾಯಕ ಇಂಜಿನಿಯರ್ ದಿನೇಶ್ ಹಾಗೂ ಜ್ಯೂನಿಯರ್ ಇಂಜಿನಿಯರ್ ಮಹಾಂತೇಶ್ ಎಂಬುವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿದ್ದಾರೆ. ಮಾರ್ಚ್ 23ರಂದು ಮಂಗೇನಹಳ್ಳಿ ಬಳಿ ಇಬ್ಬರು ಸ್ಕೂಟಿಯಲ್ಲಿ ಬರುತ್ತಿದ್ದಾಗಲೇ ರಸ್ತೆ ಪಕ್ಕದಲ್ಲಿದ್ದ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಶಿವರಾಜ್ ಹಾಗೂ ಅವರ ಮಗಳು ಚೈತನ್ಯ ಎಂಬುವರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಕೆಲವೇ ದಿನಗಳಲ್ಲಿ ನಡೆಯಬೇಕಿದ್ದ ಮದುವೆಗಾಗಿ ಕಲ್ಯಾಣ ಮಂಟಪ ಬುಕ್ ಮಾಡಿಕೊಂಡು ತಂದೆ-ಮಗಳು ಸ್ಕೂಟಿಯಲ್ಲಿ ವಾಪಸ್ ಮನೆಗೆ ಬರುತ್ತಿದ್ದಾಗ ದುರಂತ ಸಂಭವಿಸಿತ್ತು. ಬಳಿಕ ಸರ್ಕಾರವು ಇವರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದೆ. ಘಟನೆ ಸಂಬಂಧ ಮೃತರ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಬೆಸ್ಕಾಂ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಟ್ರಾನ್ಸ್ ಫಾರ್ಮರ್ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ