ಬೆಂಗಳೂರು: ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಅಲ್ಲಿಂದ ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಎರಡು ಡೋಸ್ ಕೋವಿಡ್ ಲಸಿಕೆ ಹಾಗೂ 72 ಗಂಟೆಗಳ ಒಳಗಿನ ಆರ್‌ಟಿ-ಪಿಸಿಆರ್ ಪ್ರಮಾಣಪತ್ರ ಹೊಂದಿರಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ.
ಕೇರಳದಿಂದ ಬರುವವರು ಕಡ್ಡಾಯವಾಗಿ 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಬೇಕು. ಏಳನೇ ದಿನ ಪ್ರತಿಯೊಬ್ಬರಿಗೂ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಬೇಕು. ಪಾಸಿಟಿವ್ ಬಂದಲ್ಲಿ ಅಂತಹವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಬೇಕು. ನೆಗೆಟಿವ್ ಬಂದವರಿಗೆ ಕ್ವಾರಂಟೈನ್ ತೆರವುಗೊಳಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆಯನ್ನು ಶಿಕ್ಷಣ ಸಂಸ್ಥೆಗಳು, ಉದ್ಯೋಗಿಗಳ ಕ್ವಾರಂಟೈನ್ ವ್ಯವಸ್ಥೆಯನ್ನು ಕಂಪನಿ ಅಥವಾ ಕಚೇರಿಗಳು ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ.
ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳನ್ನು ಹೊರತುಪಡಿಸಿ ಕೇರಳದಿಂದ ಆಗಮಿಸುವವರು ಆರ್‌ಟಿ-ಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿಯನ್ನು ಹಾಜರುಪಡಿಸಬೇಕು. ಜೊತೆಗೆ 7 ದಿನ ಹೋಮ್ ಕ್ವಾರಂಟೈನ್‌ನಲ್ಲಿರುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.
ಸಾಂವಿಧಾನಿಕ ಪದಾಧಿಕಾರಿಗಳು, ಆರೋಗ್ಯ ಕಾರ್ಯಕರ್ತರು, 2 ವರ್ಷದೊಳಗಿನ ಮಕ್ಕಳು, ತುರ್ತು ಪರಿಸ್ಥಿತಿಯಲ್ಲಿ ಬರುವ (ಕುಟುಂಬದಲ್ಲಿ ಸಾವು, ವೈದ್ಯಕೀಯ ಚಿಕಿತ್ಸೆ) ಅಲ್ಪಾವಧಿಯ ಪ್ರಯಾಣಿಕರಿಗೆ(3 ದಿನಕ್ಕೆ ಮಾತ್ರ ) ಕೋವಿಡ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: ರಾಜ್ಕುಮಾರ್, ವಿಷ್ಣುವರ್ಧನ್ ಪುತ್ಥಳಿ ಸೇರಿದಂತೆ ಅಕ್ರಮ ಪ್ರತಿಮೆಗಳ ತೆರವು: ಬಿಬಿಎಂಪಿಯಿಂದ ಪಟ್ಟಿ ರಿಲೀಸ್