ಆನೇಕಲ್ : ಎರಡು ದಿನದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರಿಂದ ವಸತಿ ಸಂಕೀರ್ಣದ ನಿವಾಸಿಗಳಲ್ಲಿ ಕೋವಿಡ್ ಭೀತಿ ಕಾಡುತ್ತಿದೆ.
ಆನೇಕಲ್-ಅತ್ತಿಬೆಲೆ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಎಂ. ಮೇಡಹಳ್ಳಿ ಬಳಿಯ ಜನಾಧಾರ್ ಶುಭಾ ಅಪಾರ್ಟ್ಮೆಂಟ್ ಆವರಣದಲ್ಲಿ ನಿನ್ನೆ ಸಾಯಿ (32) ಎಂಬಾತ ಗೋವಾ ಮೂಲದ ವ್ಯಕ್ತಿ ಸಾವನ್ನಪ್ಪಿದ್ದರು. 15 ದಿನದ ಹಿಂದೆ ಬಾಡಿಗೆಗೆ ಬಂದಿದ್ದು ಏಕಾಏಕಿ ಸಾವನ್ನಪ್ಪಿದ್ದು, ಕೋವಿಡ್ ಸೋಂಕು ಎಂಬ ವದಂತಿ ಹಬ್ಬಿತ್ತು. ಅದರ ಬೆನ್ನಲ್ಲೇ ಇಂದು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಒಂದೇ ಅಪಾರ್ಟ್ಮೆಂಟ್ನಲ್ಲಿ ಇಬ್ಬರು ಸಾವನ್ನಪ್ಪಿದ್ದರಿಂದ ನಿವಾಸಿಗಳಲ್ಲಿ ಸಹಜವಾಗಿ ಆತಂಕ ಮನೆ ಮಾಡಿದೆ.
ಅಪಾರ್ಟ್ಮೆಂಟ್ ನಿರ್ವಾಹಕರ ನಿರ್ಲಕ್ಷ್ಯ ಎಂದು ಮೇಲ್ನೋಟಕ್ಕೆ ಆರೋಪ ಕೇಳಿಬರುತ್ತಿದ್ದು, ಅಸೋಸಿಯೇಷನ್ ಅಧ್ಯಕ್ಷರು ಬಾಡಿಗೆಗೆ ಬರುವವರನ್ನು ಯಾವುದೇ ಸೋಂಕಿನ ವರದಿ ಪರಿಶೀಲಿಸದೆ ಅಪಾರ್ಟ್ಮೆಂಟ್ಗೆ ಸೇರಿಸಿಕೊಳ್ಳುತ್ತಿದ್ದಾರೆಂಬ ಆರೋಪವನ್ನು ನಿವಾಸಿಗಳು ಮಾಡಿದ್ದಾರೆ.
ಇಬ್ಬರು ದಿಢೀರ್ ಸಾವನ್ನಪ್ಪಿದರೂ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದ್ದಲ್ಲದೆ, ಸಮರ್ಪಕ ಸೋಂಕು ನಿವಾರಣಾ ಪದ್ದತಿಗಳನ್ನು ಗಾಳಿಗೆ ತೂರಿದ್ದಾರೆ. ಕನಿಷ್ಟ ಸ್ಯಾನಿಟೈಸರ್ ಕೂಡ ಸಿಂಪಡಣೆ ಮಾಡದೆ ಮತ್ತು ಗ್ರಾಮ ಪಂಚಾಯತಿಯಿಂದ ಬ್ಲೀಚಿಂಗ್ ಪೌಡರ್ ಹಾಕಲು ಬಂದವರು ಸಹ ಬೇಜವಾಬ್ದಾರಿ ತೋರಿದ್ದಾರೆಂದು ಜನಾಧರ್ ಶುಭ ಆಡಳಿತ ಮಂಡಳಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.