ಬೆಂಗಳೂರು: ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಆಲಿಸಬೇಕು ಮತ್ತು ಶೀಘ್ರವಾಗಿ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎನ್ನುವುದು "ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ" ಕಾರ್ಯಕ್ರಮದ ಆಶಯ.
ಕಂದಾಯ ಸಚಿವ ಆರ್ ಅಶೋಕ್ ನೇತೃತ್ವದಲ್ಲಿ ನಡೆಯುತ್ತಿರುವ "ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ" ಕಾರ್ಯಕ್ರಮ ನಾಳೆಯಿಂದ ನ.26-27ರ ವರೆಗೆ ಎರಡು ದಿನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಜರಬಂಡಹಳ್ಳಿಯಲ್ಲಿ ಸಚಿವ ಅಶೋಕ್ ಅವರು ಗ್ರಾಮವಾಸ್ತವ್ಯವನ್ನು ಡಾ. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳೊಂದಿಗೆ ಊಟ ಮಾಡಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ಇದೇ ಸಂದರ್ಭದಲ್ಲಿ ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಿದ್ದು, ಆದಿಚುಂಚನಗಿರಿ ಪೀಠಾಧಿಪತಿಗಳಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳು ಉದ್ಘಾಟನೆಯಲ್ಲಿ ಭಾಗಿವಹಿಸಲಿದ್ದಾರೆ.
ಜನರಿಗೆ ಉನ್ನತ ಅಧಿಕಾರಿಗಳು ಸಹ ಸುಲಭವಾಗಿ ಸಿಗಬೇಕು, ಜನರ ಸಮಸ್ಯೆ ಬಗ್ಗೆ ಅವರಿಗೂ ಮನವರಿಕೆ ಆಗಬೇಕು. ಆಗ ಮಾತ್ರ ಶೀಘ್ರ ಪರಿಹಾರ ದೊರೆಯಲು ಸಾಧ್ಯ. ರಾಜ್ಯಾದ್ಯಂತ ಈ ವರೆಗೆ ನಡೆದ "ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ" ಕಾರ್ಯಕ್ರಮದಲ್ಲಿ ಒಟ್ಟು 3 ಲಕ್ಷಕ್ಕೂ ಅಧಿಕ ಜನರಿಗೆ ಸೌಲಭ್ಯಗಳನ್ನು ವಿತರಿಸಲಾಗಿದೆ.ಈ ಗ್ರಾಮ ವಾಸ್ತವ್ಯದಲ್ಲಿ 18 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಇಲಾಖೆಯಿಂದ ಸೌಲಭ್ಯ ವಿತರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಸಚಿವರು ಜನಸ್ಪಂದನ, ಹನಮಂತಪುರ ಗ್ರಾಮದಲ್ಲಿ ಗ್ರಾಮ ಸಭೆ, ಕುಂದು ಕೊರತೆಗಳ ಪರಿಶೀಲನೆ ಹಾಗೂ ಸ್ಥಳೀಯರ ಮಾತುಕತೆ ನಡೆಸಲಿದ್ದಾರೆ. ಸರ್ಕಾರಿ ಶಾಲೆಯ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು. ನ. 27 ರಂದು ಭಾನುವಾರ ಪೌತಿ ಖಾತೆ ಅಭಿಯಾನ ಸಹ ನಡೆಯಲಿದೆ.
ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶಿಲ್ದಾರರು ಸಹ ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಪರಿಹಾರ ಮಾಡಲಿದ್ದಾರೆ. 24 ಗಂಟೆಗಳ ಕಾಲ ಹಳ್ಳಿಯಲ್ಲಿಯೇ ಇದ್ದು, ಎಲ್ಲ ಅರ್ಜಿಗಳನ್ನು ಕಡ್ಡಾಯವಾಗಿ ಅಲ್ಲಿಯೇ ವಿಲೇವಾರಿ ಮಾಡುವುದು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ವಿಶೇಷತೆಯಾಗಿದೆ.
ಇನ್ನೂ ಇದೇ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಮತ್ತು ಮುಖಂಡರು ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಇತರ ಅಧಿಕಾರ ವರ್ಗ ಭಾಗವಹಿಸಲಿದ್ದಾರೆ.
ಇದನ್ನೂ ಓದಿ:ಹೆಸ್ಕಾಂ ಅಧಿಕಾರಿ ತರಾಟೆಗೆ ತೆಗೆದುಕೊಂಡ ಶಾಸಕ ಶ್ರೀಮಂತ ಪಾಟೀಲ್...