ಬೆಂಗಳೂರು : ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ ಹಿನ್ನೆಲೆ ರಾಜ್ಯದಲ್ಲೂ ಎರಡು ದಿನ ಶೋಕಾಚರಣೆ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಗಾಯಕಿಯ ಗೌರವಾರ್ಥ ಭಾನುವಾರ ಮತ್ತು ಸೋಮವಾರ ಎರಡು ದಿನ ಶೋಕಾಚರಣೆ ನಡೆಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವೂ ಗಾನ ಕೋಗಿಲೆಯ ಗೌರವಾರ್ಥ ಶೋಕಾಚರಣೆಗೆ ಆದೇಶ ಹೊರಡಿಸಿದೆ.
ಈ ಅವಧಿಯಲ್ಲಿ ಯಾವುದೇ ಅಧಿಕೃತ ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ನಿತ್ಯ ರಾಷ್ಟ್ರ ಧ್ವಜವನ್ನು ಹಾರಿಸಲ್ಪಡುವ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ತಿರಂಗಾ ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು.
ಸ್ಯಾಂಡ್ನಲ್ಲಿ ಅರಳಿದ ಲತಾ ಮಂಗೇಶ್ಕರ್ ಕಲಾಕೃತಿ : ಸಿಲಿಕಾನ್ ಸಿಟಿಯಲ್ಲಿ ಅಗಲಿದ ಗಾಯಕಿಗೆ ವಿನೂತನವಾಗಿ ಗೌರವ ಸಲ್ಲಿಸಲಾಗಿದೆ.
ಎಂ ಸ್ಯಾಂಡ್ನಲ್ಲಿ ಗಾಯಕಿ ಲತಾ ಮಂಗೇಶ್ಕರ್ ಅವರ ಕಲಾಕೃತಿ ಅರಳಿದ್ದು, ಅಗಲಿದ ಗಾಯಕಿಗೆ ಸಿಲಿಕಾನ್ ಸಿಟಿಯಲ್ಲಿ ಕಲಾವಿದ ಬಾದಲ್ ನಂಜುಂಡ ಸ್ವಾಮಿ ವಿನೂತನ ರೀತಿಯಲ್ಲಿ ಗೌರವ ನಮನ ಸಲ್ಲಿಸಿದ್ದಾರೆ.
ರಸ್ತೆ ಗುಂಡಿ ಬಗ್ಗೆ ಜಾಗೃತಿ ಮೂಡಿಸಲು ಗುಂಡಿಗಳನ್ನೇ ಬಳಸಿ ಚಿತ್ತಾರ ಬರೆಯುವಲ್ಲಿ ಖ್ಯಾತಿ ಪಡೆದ ಬಾದಲ್ ನಂಜುಂಡಸ್ವಾಮಿ, ಲತಾ ಮಂಗೇಶ್ಕರ್ ಅವರಿಗೆ ವಿನೂತನ ರೀತಿಯ ಗೌರವ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ: ಮೌನವಾಯ್ತು ಹಾಡುಹಕ್ಕಿ: ಗಾನಕೋಗಿಲೆ ಲತಾ ಮಂಗೇಶ್ಕರ್ ಇನ್ನಿಲ್ಲ..!
ಕಲಬುರಗಿಯಲ್ಲಿ ಲತಾ ಮಂಗೇಶ್ಕರ್ಗೆ ಶ್ರದ್ಧಾಂಜಲಿ : ಕಲಬುರಗಿಯಲ್ಲೂ ಸಹ ಅಭಿಮಾನಿಗಳು ಲತಾ ಮಂಗೇಶ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ನಗರದ ಎಸ್ ವಿ.ಪಿ ವೃತ್ತದಲ್ಲಿ ಹಿಂದು ಜಾಗರಣ ವೇದಿಕೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಂಗೀತ ಪ್ರೇಮಿಗಳು ಲತಾ ಮಂಗೇಶ್ಕರ್ ಅಮರ್ ರಹೆ, ಅಮರ್ ರಹೆ ಎಂದು ಘೋಷಣೆ ಕೂಗುವ ಮೂಲಕ ಅಗಲಿದ ಗಾನ ಕೋಗಿಲೆಗೆ ಸಂತಾಪ ಸೂಚಿಸಿದರು.