ಬೆಂಗಳೂರು: ಹೊಸ ವರ್ಷಕ್ಕೆ ಒಡಿಶಾದಿಂದ ಬೆಂಗಳೂರಿಗೆ ಬರಲು ಸಿದ್ಧವಾಗಿದ್ದ ಭಾರಿ ಪ್ರಮಾಣದ ಗಾಂಜಾವನ್ನು ಕೋಣನಕುಂಟೆ ಠಾಣಾ ಪೊಲೀಸರು ಜಪ್ತಿ ಮಾಡಿದ್ದಾರೆ. ಸ್ಥಳೀಯ ದಂಧೆಕೋರರು ನೀಡಿದ ಮಾಹಿತಿಯನ್ವಯ ಕಾರ್ಯಾಚರಣೆ ಕೈಗೊಂಡ ಕೋಣನಕುಂಟೆ ಠಾಣಾ ಪೊಲೀಸರ ತಂಡ ಒಡಿಶಾದ ಕಾಡು ದಾರಿಯಲ್ಲೇ ಆರೋಪಿಗಳನ್ನು ಬಂಧಿಸಿದೆ.
ಜಗದೀಶ್ ಜಟ್ಟಿ ಹಾಗೂ ಮುರುಳಿ ಬೆಹ್ರಾ ಬಂಧಿತ ಆರೋಪಿಗಳು. ಕಳೆದ ಎರಡು ತಿಂಗಳಿನಿಂದ ರೈಲಿನ ಮೂಲಕ ಬೆಂಗಳೂರಿಗೆ ಗಾಂಜಾ ತರುತ್ತಿದ್ದ ಆರೋಪಿಗಳು ಪಿಳ್ಳಗಾನಹಳ್ಳಿಯ ಪಾಳು ಮನೆಯೊಂದರಲ್ಲಿ ಶೇಖರಿಸಿಡುತ್ತಿದ್ದರು. ಬಳಿಕ ಅಲ್ಲಿಂದಲೇ ನೇರವಾಗಿ ಗ್ರಾಹಕರಿಗೆ ಸರಬರಾಜು ಮಾಡಲು ಸಿದ್ಧತೆ ನಡೆಸಿದ್ದರು. ಒಂದು ವಾರದ ಹಿಂದೆ ಸ್ಥಳೀಯ ಮಾದಕ ದಂಧೆಕೋರರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳ ಬೃಹತ್ ಪ್ರಮಾಣದ ಗಾಂಜಾ ಶೇಖರಣೆ ವಿಚಾರ ಪತ್ತೆಯಾಗಿತ್ತು.
ತಕ್ಷಣ ಸ್ಥಳೀಯ ದಂಧೆಕೋರರ ಮೂಲಕವೇ ಆರೋಪಿಗಳಿಗೆ ಕರೆ ಮಾಡಿಸಿದ್ದ ಪೊಲೀಸರು ತುರ್ತಾಗಿ ಗಾಂಜಾ ಬೇಕಿದೆ ಎಂದು ಒಡಿಶಾಗೆ ಬರುವುದಾಗಿ ತಿಳಿಸಿ ಗ್ರಾಹಕರ ಸೋಗಿನಲ್ಲಿ ತಾವೇ ತೆರಳಿದ್ದರು. ಈ ವೇಳೆ ಒಡಿಶಾದ ಗಜಪತಿ ಜಿಲ್ಲೆಯ ಮಯೂರ್ ಬಂಜ್ ಅರಣ್ಯ ಪ್ರದೇಶದಲ್ಲಿ ಗಾಂಜಾ ತಂದು ಟೆಂಪೋ ಟ್ರಾವೆಲ್ಸ್ಗೆ ತುಂಬುತ್ತಿದ್ದ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಒಟ್ಟು 35 ಲಕ್ಷ ರೂಪಾಯಿ ಮೌಲ್ಯದ 263 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸ ವರ್ಷಾಚರಣೆಯ ಪಾರ್ಟಿ ಆಯೋಜಕರು, ಗ್ರಾಹಕರುಗಳಿಂದ ಮುಂಗಡ ಬುಕ್ಕಿಂಗ್ ಮಾಡಿರುವ ಸಾಧ್ಯತೆಯಿದ್ದು, ಆರೋಪಿಗಳನ್ನ ವಿಚಾರಣೆ ನಡೆಸಲಾಗುತ್ತಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರು ಪೊಲೀಸರ ಭರ್ಜರಿ ಬೇಟೆ: ಗಾಂಜಾ, ಛರಸ್, ಮಟ್ಕಾ ದಂಧೆ ಮಾಡುತ್ತಿದ್ದವರ ಬಂಧನ