ಬೆಂಗಳೂರು: ಗೋಣಿಚೀಲದಲ್ಲಿ ಮಾದಕ ವಸ್ತು ಇಟ್ಟುಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ 10.25 ಲಕ್ಷ ರೂ. ಮೌಲ್ಯದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೋಲಾರದ ಮಹಮ್ಮದ್ ಖಲೀಮುಲ್ಲಾ (46), ನವಾಜ್ ಪಾಷಾ (30) ಬಂಧಿತರು. 20 ಕೆಜಿ 215 ಗ್ರಾಂ ತೂಕದ ಗಾಂಜಾ ಸೊಪ್ಪು ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಪೂರ್ವ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.
ಕಲಾಸಿಪಾಳ್ಯ ವ್ಯಾಪ್ತಿಯ ಪ್ರದೀಪ್ ಸರ್ಕಲ್ ಹತ್ತಿರದ ನ್ಯೂ ಗೈಡ್ ಹೋಟೆಲ್ ಪಕ್ಕದ ಗಲ್ಲಿಯಲ್ಲಿ ಇಬ್ಬರು ಗೋಣಿಚೀಲದಲ್ಲಿ ಮಾದಕ ವಸ್ತು ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಬಗ್ಗೆ ಕಲಾಸಿಪಾಳ್ಯ ಠಾಣೆಯ ಪೊಲೀಸರಿಗೆ ಮಾಹಿತಿ ಬಂದಿತ್ತು.
ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಧಾವಿಸಿ ಇಬ್ಬರನ್ನು ಬಂಧಿಸಿ ಬೈಕ್ ಹಾಗೂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಇಬ್ಬರು ಆರೋಪಿಗಳು ಗಾಂಜಾ ಮಾರಾಟದ ದಂಧೆಯಲ್ಲಿ ಹಲವು ವರ್ಷದಿಂದ ಭಾಗಿಯಾಗಿರುವುದು ವಿಚಾರಣೆಯ ವೇಳೆ ತಿಳಿದು ಬಂದಿದೆ ಎಂದಿದ್ದಾರೆ.
ತಂಡವನ್ನು ಶ್ಲಾಘಿಸಿದ ಡಿಸಿಪಿ: ಚಿಕ್ಕಪೇಟೆ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರವಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಎಂ.ಎಲ್.ಚೇತನ್ ಕುಮಾರ್, ಪಿಎಸ್‌ಐ ಪ್ರಸನ್ನ ಮತ್ತು ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಶ್ಲಾಘಿಸಿದ್ದಾರೆ.