ಬೆಂಗಳೂರು : ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಅವರ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆ ಹಾಗೂ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವಂತೆಯೇ ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಟ್ವೀಟ್ ವಾರ್ ನಡೆಸಿವೆ.
ವಿಧಾನಸೌಧದ ಸನಿಹದಲ್ಲಿಯೇ ಒಬ್ಬ ಶಾಸಕರಿಗೇ ರಕ್ಷಣೆ ನೀಡಲಾಗದ್ದು ನಿಮ್ಮ ಸರ್ಕಾರದ ವೈಫಲ್ಯವಲ್ಲವೇ? ಉದ್ಯೋಗ ಕೇಳಿದ ಯುವತಿಯನ್ನು ದುರುಪಯೋಗಪಡಿಸಿಕೊಂಡ ನಿಮ್ಮಿಂದ ಇಡೀ ರಾಜ್ಯಕ್ಕೆ ಕೆಟ್ಟ ಹೆಸರು.
ರಕ್ಷಣೆ ಕೇಳಿದ ಆ ಯುವತಿಗಾದರೂ ರಕ್ಷಣೆ ಒದಗಿಸುವಿರಾ? ಅಥವಾ ನಿಮ್ಮ ಮಹಿಳಾ ವಿರೋಧಿ ನಡೆ ಮುಂದುವರೆಸುವಿರಾ? ಎಂದು ಕಾಂಗ್ರೆಸ್ ಟ್ವೀಟ್ ಮುಖಾಂತರ ಬಿಜೆಪಿ ಸರ್ಕಾರವನ್ನು ಕೆಣಕಿದೆ.
ನಿಮ್ಮ ಶ್ರೀನಿವಾಸ್ ಪ್ರಸಾದ್ ಹೇಳಿದಂತೆ ವಾಮಮಾರ್ಗದ ಸರ್ಕಾರ. ನಿಮ್ಮವರೇ ಹೇಳಿದಂತೆ ಬ್ಲಾಕ್ಮೇಲ್ ಸಂಪುಟ. ಹನಿಟ್ರ್ಯಾಪ್ ಮೂಲಕ ಆಪರೇಷನ್ ಕಮಲ. ಯತ್ನಾಳ್ ಹೇಳಿದಂತೆ ಫ್ಯಾಮಿಲಿ ಸರ್ಕಾರ. 'ದಂಡ'ದ ಸರ್ಕಾರಕ್ಕೆ 'ಮಾನ' ಎಲ್ಲಿದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿರುವ ಭ್ರಷ್ಟಾಚಾರ ಆರೋಪಿ ಮಹಾ ನಾಯಕ ಎನ್ನುತ್ತ ಬಿಎಸ್ವೈ ಅವರತ್ತ ಏಕೆ ಪರೋಕ್ಷವಾಗಿ ಗುರಿ ಇಡುತ್ತಿದ್ದೀರಿ?! ಯತ್ನಾಳ್ ಹೇಳಿದಂತೆ ವಿಜಯೇಂದ್ರ ಸಿಡಿ ಫ್ಯಾಕ್ಟರಿ ಮೂಲಕ ಬ್ಲಾಕ್ಮೇಲ್ ಮಾಡಲಾಗುತ್ತದೆ ಎಂಬ ಮಾತನ್ನ ನೀವೂ ಪರೋಕ್ಷವಾಗಿ ಹೇಳುತ್ತಾ #BSYmuktaBJP ಅಭಿಯಾನ ಮುಂದುವರೆಸುತ್ತಿರುವಿರಾ ಎಂದು ಕಾಲೆಳೆದಿದೆ.
ಹೈಕೋರ್ಟ್ ನಿಗಾದಲ್ಲೇ ಸಿಡಿ ಪ್ರಕರಣದ ತನಿಖೆ ಮಾಡಬೇಕು, ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನ ಒತ್ತಾಯಿಸುತ್ತೇನೆ. @BJP4Karnataka ಸುಳ್ಳಿನ ಕಾರ್ಖಾನೆ. ಸುಳ್ಳನ್ನೇ ಸತ್ಯವೆಂದು ಬಿಂಬಿಸುತ್ತಾರೆ. ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಆರೋಪ ಮಾಡುವ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ಈಶ್ವರ್ ಖಂಡ್ರೆ ಕಿಡಿಕಾರಿದ್ದು, ಇದನ್ನು ಟ್ವೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಸಿಡಿ ಪ್ರಕರಣದ ಕುರಿತು ಬಿಜೆಪಿ ಮಾಡಿರುವ ಟ್ವೀಟ್‌ನ ಖಂಡಿಸುತ್ತೇನೆ. ಅಪರಾಧ ಮಾಡುವವರು, ದೌರ್ಜನ್ಯ ಎಸಗುವವರೇ ಅವರು, ಆರೋಪ ಬೇರೆಯವರ ಮೇಲೆ ಮಾಡುತ್ತಾರೆ. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಮೊದಲಿನಿಂದಲೂ ಒತ್ತಾಯಿಸುತ್ತಾ ಬಂದಿದ್ದೇವೆ. ವಿಶ್ವಾಸಾರ್ಹತೆ ಕಳೆದುಕೊಂಡಿರುವ ಎಸ್ಐಟಿಯಿಂದ ಅದು ಸಾಧ್ಯವಿಲ್ಲ.
ವಾಟ್ಸ್‌ಆ್ಯಪ್ ಯುನಿವರ್ಸಿಟಿಯಲ್ಲೇ ಹುಟ್ಟಿ ಬೆಳೆದ ಬಿಜೆಪಿ, ವಿಪಕ್ಷ ನಾಯಕರ ತೇಜೋವಧೆಗಾಗಿ ನೀಚ ಮಟ್ಟಕ್ಕಿಳಿದು ಸುಳ್ಳು, ಅಪಪ್ರಚಾರಗಳ "ಫೇಕ್ ಫ್ಯಾಕ್ಟರಿ" ಎಂಬ ಕುಖ್ಯಾತಿ ಪಡೆದಿದ್ದೀರಿ. ಈ ವಿಕೃತಿಗಳನ್ನು ಸಹಿಸಲಾಗದು. ಕಟೀಲ್ ಅವರೇ ಈ ಟ್ವೀಟ್ ಅಳಿಸಿ ಕ್ಷಮೆ ಕೇಳದೇ ಹೋದಲ್ಲಿ ಮತ್ತೊಮ್ಮೆ ಕಾನೂನು ಕ್ರಮಕೈಗೊಳ್ಳಲಿದ್ದೇವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.
ಇದಕ್ಕೆ ಟ್ವೀಟ್ನಲ್ಲೇ ಪ್ರತಿಕ್ರಿಯಿಸಿರುವ ಬಿಜೆಪಿ, ಮಾನ್ಯ ಸಿದ್ದರಾಮಯ್ಯ ಅವರೇ, ಯಾವ ಮಾನದಂಡ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸೋಣ ಎಂದು ಹೇಳುತ್ತಿದ್ದೀರಿ? ಲೋಕಸಭಾ ಚುನಾವಣೆ, ಉಪಚುನಾವಣೆಗಳಲ್ಲಿ ಸೋತಿದ್ದೀರಿ, ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲೇ ಸೋತಿದ್ದೀರಿ. ಮುಂದೆ ಕಾಂಗ್ರೆಸ್ ಸೋಲುವುದನ್ನು ಅರಿತು ಡಿಕೆಶಿ ಬಲ ಕುಗ್ಗಿಸುವ ಪ್ರಯತ್ನದ ಭಾಗವೇ ಇದು? ಎಂದು ಲೇವಡಿ ಮಾಡಿದೆ.
ಸಿಡಿ ಘಟನೆ ಹಿಂದೆ ಒಬ್ಬ ಜೈಲಿನಿಂದ ಜಾಮೀನಿನ ಮೇಲೆ ಹೊರಗಡೆ ಬಂದಿರುವ ಭ್ರಷ್ಟಾಚಾರಿ ಆರೋಪಿ ಮಹಾ ನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ. ಆ ಮಹಾನಾಯಕ ಕೂಡ ತನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಹೇಳುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ. ರಾಹುಲ್ ಗಾಂಧಿ ಏಕೆ ಸುಕನ್ಯಾ ದೇವಿಯ ಪರವಾಗಿ ಒಮ್ಮೆಯೂ ಧ್ವನಿ ಎತ್ತಿಲ್ಲ? ಎಂದು ಲೇವಡಿ ಮಾಡಲಾಗಿದೆ.
ನನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಮಹಾನಾಯಕರೊಬ್ಬರು ಹೇಳಿದ್ದಾರೆ. ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ, ಗೊತ್ತಾಗುತ್ತಿಲ್ಲ ಎಂದು ಮಹಾನಾಯಕಿಯೊಬ್ಬರು ಹೇಳಿದ್ದಾರೆ. ಏನಿದೆಲ್ಲಾ!? ಬೆಂಕಿಯಿಲ್ಲದೆ ಹೊಗೆಯಾಡುವುದೇ? ಪಕ್ಷ ತೊರೆದವರ ವಿರುದ್ಧ ಕಾಂಗ್ರೆಸ್ ಹಗೆತನ ಸಾಧಿಸುತ್ತಿದೆ ಎಂದು ಬಿಜೆಪಿ ಹರಿಹಾಯ್ದಿದೆ.