ಬೆಂಗಳೂರು: ನಗರದ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಚ್ಚರಿಯ ಹೇಳಿಕೆ ನೀಡಿದ್ದು, ಈ ಈದ್ಗಾ ಮೈದಾನ ಪಾಲಿಕೆ ಸ್ವತ್ತಲ್ಲ ಎಂದಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜಪೇಟೆ ಮೈದಾನ ವಿವಾದ ಸಂಬಂಧ 1974ನೇ ಸಾಲಿನಲ್ಲಿ ಸಿಟಿ ಸರ್ವೆ ಪ್ರಕಾರ ನಮ್ಮ ಖಾತೆ ಇದೆ ಎಂದು ಉಲ್ಲೇಖವಾಗಿದೆ. ಮೇಲ್ನೋಟಕ್ಕೆ ಮೈದಾನದ ಸ್ವಾಮ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲ. ಆದರೆ, ಖಾತಾ ಪ್ರಕಾರ ಮಾಲಿಕತ್ವ ನಮ್ಮದು. ವಕ್ಫ್ ಬೋರ್ಡ್ ದಾಖಲೆಸಮೇತ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅನುಮತಿ ನೀಡುವಂತೆ ಹಿಂದೂಪರ ಸಂಘಟನೆಗಳು ಅನುಮತಿ ಕೋರಿದ್ದ ಬಳಿಕ ತೀವ್ರ ವಿವಾದ ಹುಟ್ಟಿಕೊಂಡಿತ್ತು. ಆನಂತರ, ಬಿಬಿಎಂಪಿ ಇದು ನಮ್ಮ ಸ್ವತ್ತು ಎಂದು ಹೇಳಿತ್ತು. ಆದರೆ, ಇದೀಗ ಯೂ ಟರ್ನ್ ಹೊಡೆದಿರುವುದು ಅಚ್ಚರಿಗೆ ಕಾರಣವಾಗಿದೆ.
ಇತ್ತೀಚೆಗೆ ವಕ್ಫ್ ಬೋರ್ಡ್ ಮಂಡಳಿ ಮೈದಾನಕ್ಕೆ ಸಂಬಂಧಿಸಿದಂತೆ ಮೈಸೂರು ಆಡಳಿತ ಕಾಲದಿಂದಲೂ ಇದ್ದ ದಾಖಲೆಗಳನ್ನು ಬಿಬಿಎಂಪಿಗೆ ಸಲ್ಲಿಕೆ ಮಾಡಿತ್ತು. ಇದನ್ನು ಬಿಬಿಎಂಪಿ ಕಾನೂನು ವಿಭಾಗ ಪರಿಶೀಲನೆ ನಡೆಸಿ, ಈ ಸ್ವತ್ತು ನಮ್ಮದಲ್ಲ ಎನ್ನುವ ಅಭಿಪ್ರಾಯ ಹೇಳಿತ್ತು ಎನ್ನಲಾಗಿದೆ.
ವಕ್ಫ್ ಬೋರ್ಡ್ ಸ್ವಾಗತ: ಈದ್ಗಾ ಮೈದಾನ ವಿವಾದ ಸಂಬಂಧ ಈಗಾಗಲೇ ನಾವು ಖಾತೆಗಾಗಿ ಬಿಬಿಎಂಪಿಗೆ ಅರ್ಜಿ ಸಲ್ಲಿಕೆ ಮಾಡಿದ್ದೇವೆ. ಬಿಬಿಎಂಪಿ ಇದು ನಮ್ಮ ಸ್ವತ್ತು ಅಲ್ಲ ಎಂದಿರುವುದು ಸಂತಸ ಎಂದಿದೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ ಸಾದಿ ಹೇಳಿದ್ದಾರೆ.
ಪ್ರಸ್ತುತ ಯಾವುದೇ ತರದ ತೊಂದರೆ ಆಗದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ 20 ರಿಸರ್ವ್ ಪೊಲೀಸರನ್ನು ಹಾಗೂ 5 ಸ್ಥಳೀಯ ಪೊಲೀಸರನ್ನು ಮೈದಾನದ ಸುತ್ತಲೂ ಇರಿಸಲಾಗಿದೆ. ಅದರೊಂದಿಗೆ 12 ಸಿಸಿಟಿವಿಗಳನ್ನು ಹಾಕಲಾಗಿದೆ. ಅ. 15ರ ವರೆಗೆ ಈ ಒಂದು ಭದ್ರತೆ ಮುಂದುವರೆಯಲಿದ್ದು, ನಂತರದ ದಿನಗಳಲ್ಲಿ ಆಗುವ ಬೆಳವಣಿಗೆಗಳ ಮೇಲೆ ಈ ಭದ್ರತೆ ಮುಂದುವರೆಸುವುದರ ಕುರಿತು ನಿರ್ಧರಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ತ್ರೀಶಕ್ತಿ ಸಂಘಟನೆಗಳಿಂದ ತಯಾರಾಗುವ ವಸ್ತುಗಳು ವಿದೇಶದಲ್ಲಿ ಮಾರಾಟವಾಗಬೇಕು: ಸಿಎಂ