ಮಂಗಳೂರು: ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಅಭಾವ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿಯೇ ನೀರಿನ ಸಮಸ್ಯೆ ಉಂಟಾಗಿದ್ದು, ಮಂಗಳೂರು ಜಿಲ್ಲಾಡಳಿತ ಮತ್ತು ಜನರು ಆತಂಕಕ್ಕೊಳಗಾಗಿದ್ದಾರೆ. ನೀರಿನ ಸಮಸ್ಯೆ ತಲೆದೋರಿದಾಗ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡಿ ಸಮಸ್ಯೆ ನಿವಾರಿಸಲಾಗುತ್ತದೆ. ಆದರೆ ಈ ಸಲ ಮಳೆ ಕೊರತೆಯಿಂದಾಗಿ ಸೆಪ್ಟೆಂಬರ್ ಮೊದಲ ವಾರದಲ್ಲೇ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ.
ಮಂಗಳೂರು ನಗರಕ್ಕೆ ನೀರಿನ ಏಕೈಕ ಮೂಲ ನೇತ್ರಾವತಿ ನದಿ. ಈ ನದಿಗೆ ತುಂಬೆಯಲ್ಲಿ ಅಣೆಕಟ್ಟು ಕಟ್ಟಲಾಗಿದ್ದು ಇಲ್ಲಿಂದ ಮಂಗಳೂರು ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತದೆ. ಅಣೆಕಟ್ಟು 8.5 ಮೀಟರ್ ಇದ್ದು, ಮಳೆಗಾಲದಲ್ಲಿ ಸಂಪೂರ್ಣ ಭರ್ತಿಯಾಗುತ್ತದೆ. ಇಲ್ಲಿರುವ 30 ಗೇಟ್‌ಗಳಲ್ಲಿ ಕೂಡ ನೀರು ಹೊರಬಿಟ್ಟರೂ 8.5 ಮೀಟರ್ ತುಂಬಿರುತ್ತದೆ. ನೀರು ಹೊರಬಿಟ್ಟು ಏಳು ಮೀಟರ್ ನೀರು ಇರುವಂತೆ ನೋಡಿಕೊಳ್ಳಲಾಗುತ್ತದೆ.
ಈ ಬಾರಿ ಮುಂಗಾರು ಮಳೆ ವಿಳಂಬವಾಗಿದೆ ಮತ್ತು ತಡವಾಗಿ ಪ್ರಾರಂಭವಾದ ಮಳೆ ಕೆಲವೇ ದಿನಗಳಲ್ಲಿ ಮಾಯವಾಗಿದೆ. ಧಾರಾಕಾರವಾಗಿ ಸುರಿಯಬೇಕಿದ್ದ ಮಳೆ ಆಗಸ್ಟ್ ತಿಂಗಳಲ್ಲಿ ಬಿಸಿಲು ಅಬ್ಬರಿಸುತ್ತಿದೆ. ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ಕ್ಷೀಣಿಸಿದೆ. ತುಂಬೆ ಡ್ಯಾಂನಲ್ಲಿ ಈಗ 5 ಮೀಟರ್ ನಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಈ ತಿಂಗಳು ಮಳೆ ಬಾರದೇ ಇದ್ದರೆ ಮಂಗಳೂರಿಗೆ ನೀರಿನ ಸಂಕಷ್ಟ ಎದುರಾಗಲಿದೆ. ಜನರು ಬರುವ ಜನವರಿಯಲ್ಲಿಯೇ ನೀರಿನ ಸಂಕಷ್ಟ ಎದುರಿಸಬೇಕಾದ ಸಾಧ್ಯತೆ ದಟ್ಟವಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ನೀರು ಸರಬರಾಜು ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನರೇಶ್ ಶೆಣೈ ಮಾತನಾಡಿ, "ತುಂಬೆ ಡ್ಯಾಂನಲ್ಲಿ ಪ್ರಸ್ತುತ 5 ಮೀ. ನೀರಿದೆ. ಕಳೆದ ವರ್ಷಕ್ಕಿಂತ ಈ ವರ್ಷ ನದಿಯಲ್ಲಿ ನೀರು ಕಡಿಮೆ ಇರುವುದರಿಂದ ಡ್ಯಾಂನಿಂದ ನೀರನ್ನು ಹೊರ ಬಿಡುವುದನ್ನು ಕಡಿಮೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬರುವ ನಿರೀಕ್ಷೆ ಇದೆ, ಒಂದು ವೇಳೆ ಮಳೆ ಕಡಿಮೆಯಾದರೆ ಮಂಗಳೂರು ಜನತೆಗೆ ನೀರಿನ ಸಮಸ್ಯೆಯಾಗದಂತೆ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ತಿಳಿಸಿದರು.
ಸೆಪ್ಟೆಂಬರ್ ತಿಂಗಳಿನಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಒಂದು ವೇಳೆ ಮಳೆ ಕೈಕೊಟ್ಟರೆ ಜಲಕ್ಷಾಮ ಎದುರಾಗಲಿದೆ.
ಇದನ್ನೂ ಓದಿ: ಬಾರದ ಮಳೆ.. ಬಾಡಿದ ಬೆಳೆ: ಜಗಳೂರನ್ನು ಬರ ಪಟ್ಟಿಗೆ ಸೇರಿಸುವಂತೆ ರೈತರ ಆಗ್ರಹ