ಬೆಂಗಳೂರು: ಲೋಕಸಭಾ ಚುನಾವಣೆಗೆ ಪ್ರಕ್ರಿಯೆ ಆರಂಭವಾಗಿದೆ. ಆದ್ರೆ ಮೈತ್ರಿ ಪಕ್ಷಗಳಿಗೆ ಬೆಂಗಳೂರಿನ ಎರಡು ಕ್ಷೇತ್ರಗಳಲ್ಲಿ ಯಾರನ್ನೂ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕೆಂಬ ವಿಷಯ ಕಗ್ಗಂಟಾಗಿ ಪರಿಣಮಿಸಿದೆ.
ಮೈತ್ರಿ ಸೀಟು ಹಂಚಿಕೆ ಪ್ರಕಾರ ಬೆಂಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಉತ್ತರ ಜೆಡಿಎಸ್ ಪಾಲಾಗಿದೆ. ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಕಾಂಗ್ರೆಸ್ ಪಾಲಾಗಿದೆ. ಈ ಮೂರು ಕ್ಷೇತ್ರಗಳು ಸದ್ಯ ಬಿಜೆಪಿ ಹಿಡಿತದಲ್ಲಿದ್ದು, ಈ ಬಾರಿ ಮೈತ್ರಿ ಮೂಲಕ ಮೂರು ಕ್ಷೇತ್ರಗಳನ್ನು ಬಿಜೆಪಿಯಿಂದ ಕಸಿದುಕೊಳ್ಳಬೇಕು ಎಂಬುದು ದೋಸ್ತಿಗಳ ಲೆಕ್ಕಾಚಾರವಾಗಿದೆ. ಆದರೆ ದೋಸ್ತಿಗಳಿಗೆ ಸೂಕ್ತ ಅಭ್ಯರ್ಥಿಗಳ ಆಯ್ಕೆಯೇ ಕ್ಲಿಷ್ಟಕರವಾಗಿ ಪರಿಣಮಿಸಿದೆ. ಪ್ರಬಲ ಅಭ್ಯರ್ಥಿಗಳ ಆಯ್ಕೆಗೆ ದೋಸ್ತಿ ಪಕ್ಷ ಹರಸಾಹಸ ಮಾಡುತ್ತಿದೆ.
ಬೆಂಗಳೂರು ದಕ್ಷಿಣದ ಪ್ರಬಲ ಅಭ್ಯರ್ಥಿಗಾಗಿ ಕೈ ಪರದಾಟ:
ಬೆಂ.ದಕ್ಷಿಣ ಕ್ಷೇತ್ರ ಬಿಜೆಪಿಯ ಭದ್ರ ಕೋಟೆಯಾಗಿದೆ. ಅನಂತ ಕುಮಾರ್ ನಿಧನದ ಬಳಿಕ ಬಿಜೆಪಿಯ ಗೆಲುವಿನ ನಾಗಾಲೋಟ ಮುಂದುವರಿಸಲು ಪತ್ನಿ ತೇಜಸ್ವಿನಿ ಅನಂತ ಕುಮಾರ್ ಮುಂದಾಗಿದ್ದಾರೆ.
ಆದರೆ ಇತ್ತ ಕಾಂಗ್ರೆಸ್ಗೆ ಪ್ರಬಲ ಅಭ್ಯರ್ಥಿಗಳು ಸಿಗುತ್ತಿಲ್ಲ. ಕೈಗೆ ದಕ್ಷಿಣ ಕ್ಷೇತ್ರವನ್ನು ಕಸಿದುಕೊಳ್ಳುವಂಥ ಯೋಗ್ಯ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಇತ್ತ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರ ಮಗ ಪ್ರಿಯಕೃಷ್ಣ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಪ್ರಬಲ ಅಭ್ಯರ್ಥಿಯಾಗಬಲ್ಲ ಮಾಜಿ ಸಚಿವ ರಾಮಲಿಂಗಾರೆಡ್ಡಿ ಲೋಕಸಭೆಯಲ್ಲಿ ಸ್ಪರ್ಧಿಸಲು ಸಾರಸಗಟಾಗಿ ನಿರಾಕರಿಸಿದ್ದಾರೆ. ಅವರ ಮಗಳು ಸೌಮ್ಯ ರೆಡ್ಡಿಯೂ ಕಣಕ್ಕಿಳಿಯಲು ಒಪ್ಪಿಲ್ಲ. ಇತ್ತ ರಾಮಲಿಂಗಾ ರೆಡ್ಡಿ ಬೆಂಬಲ ಇಲ್ಲದೆ ಬೆಂ.ದಕ್ಷಿಣದಲ್ಲಿ ಗೆಲ್ಲುವುದು ಬಹುತೇಕ ಅಸಾಧ್ಯ. ಸಚಿವ ಸ್ಥಾನ ಸಿಗದೆ ಇರುವುದೂ ರಾಮಲಿಂಗಾ ರೆಡ್ಡಿಯವರನ್ನು ತೀವ್ರ ಅಸಮಾಧಾನಕ್ಕೊಳಪಡಿಸಿದೆ. ಹೀಗಾಗಿ ಕಾಂಗ್ರೆಸ್ಗೆ ಸೂಕ್ತ ಅಭ್ಯರ್ಥಿ ಆಯ್ಕೆ ಸವಾಲಾಗಿ ಪರಿಣಮಿಸಿದೆ ಎಂದು ಹೇಳಲಾಗ್ತಿದೆ.
ಬೆಂ.ಉತ್ತರದಲ್ಲಿ ಗೌಡ್ರು ಬಿಟ್ಟರೆ ಪ್ರಬಲ ಅಭ್ಯರ್ಥಿಯೇ ಇಲ್ಲ:
ಜೆಡಿಎಸ್ ಪಾಲಾಗಿರುವ ಬೆಂ.ಉತ್ತರ ಕ್ಷೇತ್ರದಲ್ಲೂ ಗೊಂದಲ ಮುಂದುವರೆದಿದೆ. ದೇವೇಗೌಡರು ಹೊರತುಪಡಿಸಿ ಕ್ಷೇತ್ರದಲ್ಲಿ ಜೆಡಿಎಸ್ಗೆ ಪ್ರಬಲ ಅಭ್ಯರ್ಥಿಯೇ ಇಲ್ಲ. ದೇವೇಗೌಡರು ತುಮಕೂರಲ್ಲಿ ನಿಲ್ಲುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆ ಬೆಂ.ಉತ್ತರದಲ್ಲಿ ಸೂಕ್ತ ಅಭ್ಯರ್ಥಿ ಆಯ್ಕೆ ಜೆಡಿಎಸ್ಗೆ ತಲೆನೋವಾಗಿದೆ.
ಬೆಂ.ಉತ್ತರದಲ್ಲಿ ಐವರು ಕೈ ಶಾಸಕರಿದ್ದು, ಇದರಲ್ಲಿ ನಾಲ್ವರು ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಬಣದವರಾಗಿದ್ದಾರೆ. ಹೀಗಾಗಿ ದೇವೇಗೌಡರು ಬೆಂ.ಉತ್ತರದಲ್ಲಿ ಸ್ಪರ್ಧಿಸಲು ಮೀನಾಮೇಷ ನೋಡುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಗೌಡರು ತುಮಕೂರು ನಿಂತರೆ ಬೆಂ.ಉತ್ತರಕ್ಕೆ ಯಾರು ಸೂಕ್ತ ಅಭ್ಯರ್ಥಿ ಎಂಬುದೇ ಜೆಡಿಎಸ್ ತಲೆನೋವಾಗಿ ಪರಿಣಮಿಸಿದೆ.