ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಯನ್ನು ಸಂಪೂರ್ಣ ಕನ್ನಡೀಕರಣಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಇಲಾಖೆಯ ಆಯುಕ್ತರಾದ ಕೆ.ಪಿ.ಮೋಹನ್ ರಾಜ್ ಅವರಿಗೆ ಸೂಚಿಸಿದರು.
ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದ ಆದಾಯ ತಂದುಕೊಡುವಲ್ಲಿ ಬಹುಮುಖ್ಯಪಾತ್ರ ವಹಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಗಳಲ್ಲಿ ವರ್ಷಕ್ಕೆ ಸುಮಾರು 20 ಲಕ್ಷ ದಸ್ತಾವೇಜುಗಳು ನೋಂದಣಿಯಾಗುತ್ತಿವೆ.
ಆದರೆ ಇವೆಲ್ಲವೂ ಕೂಡ ಆಂಗ್ಲಭಾಷೆಯಲ್ಲಿ ಆಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಇನ್ನೊಂದು ತಿಂಗಳ ಕಾಲಮಿತಿಯೊಳಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ನೋಂದಣಿಯಾಗುವ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಹುಮುಖ್ಯವಾಗಿ ಅಪಾರ್ಟ್ಮೆಂಟ್ ಮತ್ತು ಫ್ಲಾಟ್ಗಳ ಕ್ರಯಪತ್ರಗಳು ಕೂಡ ಸಂಪೂರ್ಣವಾಗಿ ಇಂಗ್ಲೀಷಿನಲ್ಲಿಯೇ ನೋಂದಣಿಯಾಗುತ್ತಿವೆ. ಇದು ರಾಜ್ಯ ಸರ್ಕಾರದ ಭಾಷಾನೀತಿಯ ಉಲ್ಲಂಘನೆಯಾಗಿದ್ದು, ಸಂಬಂಧಿಸಿದ ಅಧಿಕಾರಿ/ನೌಕರರ ಇಚ್ಛಾಶಕ್ತಿಯ ಕೊರತೆ ಇರುವುದಾಗಿ ನೇರವಾಗಿಯೇ ಆರೋಪಿಸಿದರು.
ಇನ್ನೊಂದು ತಿಂಗಳೊಳಗೆ ಇಲಾಖೆಯ ಎಲ್ಲ ಹಂತಗಳಲ್ಲೂ ಶೇ.100ರಷ್ಟು ಕನ್ನಡ ಅನುಷ್ಠಾನಗೊಳಿಸುವಂತೆ ಆದೇಶಿಸಿದರು. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದ ಕಾವೇರಿ ಆನ್ಲೈನ್ ಸೇವೆ ಕೂಡ ಇಂಗ್ಲೀಷ್ನಲ್ಲಿದೆ ಎಂದು ಉದಾಹರಣೆ ಸಹಿತ ವೆಬ್ಸೈಟ್ ಪ್ರದರ್ಶಿಸಿ ಮಾತು ಮುಂದುವರಿಸಿದ ನಾಗಾಭರಣ ಅವರು, ಇನ್ನು ಮುಂದೆ ಕಡ್ಡಾಯವಾಗಿ ದಸ್ತಾವೇಜುಗಳು ಕನ್ನಡದಲ್ಲಿದ್ದರೆ ಮಾತ್ರ ನೋಂದಣಿ ಮಾಡುವಂತೆ ಕಟ್ಟುನಿಟ್ಟಿನ ಕ್ರಮವಹಿಸಲು ಸೂಚಿಸಿದರು.