ಬೆಂಗಳೂರು: ಮಾಜಿ ಶಾಸಕ, ಮಾಜಿ ಉಪಾಧ್ಯಕ್ಷ ಅಂಜನಾಮೂರ್ತಿ, ಮಾಜಿ ಸಂಸದ ಆರ್. ಧ್ರುವನಾರಾಯಣ, ಮಾಜಿ ಸಚಿವ ಡಿ.ಬಿ. ಇನಾಂದಾರ್, ಮಾಜಿ ಶಾಸಕ ಯು.ಆರ್. ಸಭಾಪತಿ, ಡಾ. ಕೆ. ಭುಜಂಗಶೆಟ್ಟಿ ಸೇರಿದಂತೆ ಇತ್ತೀಚೆಗೆ ಅಗಲಿದ ಎಂಟು ಮಂದಿ ಗಣ್ಯರಿಗೆ ವಿಧಾನಸಭೆಯಲ್ಲಿ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿಧಾನ ಮಂಡಲದ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿ ನಿರ್ಗಮಿಸಿದ ನಂತರ ಸದನವು ವಂದೇ ಮಾತರಂ ಗೀತೆ ನಡೆಸುವುದರೊಂದಿಗೆ ಸದನ ಮತ್ತೆ ಸಮಾವೇಶಗೊಂಡ ವೇಳೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು, ಅಗಲಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯ ಮಂಡಿಸಿದರು.
ಮೃತ ಗಣ್ಯರ ಗುಣಗಾನ: ವಿಧಾನಸಭೆಯ ಮಾಜಿ ಉಪಾಧ್ಯಕ್ಷ ಅಂಜನಾಮೂರ್ತಿ, ಮಾಜಿ ಸಂಸದ ಆರ್. ದ್ರುವನಾರಾಯಣ, ಮಾಜಿ ಸಚಿವ ಡಿ.ಬಿ. ಇನಾಂದಾರ್, ಮಾಜಿ ಶಾಸಕರಾದ ವೆಂಕಟಸ್ವಾಮಿ, ಉಮಾಕಾಂತ್ ಬೋರ್ಕರ್, ಬಿ. ಧರ್ಮಪ್ಪ, ಖ್ಯಾತ ನೇತ್ರತಜ್ಞ ಡಾ. ಕೆ. ಭುಜಂಗಶೆಟ್ಟಿ ಅವರು ನಿಧನರಾಗಿರುವುದನ್ನು ಸದನಕ್ಕೆ ತಿಳಿಸಿದ ಸಭಾಧ್ಯಕ್ಷರು, ಮೃತರ ಗುಣಗಾನ ಮಾಡಿದರು.
ಸಂತಾಪ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಂಜನಾಮೂರ್ತಿ ಅವರು ಅಜಾತಶತ್ರು ಆಗಿದ್ದರು. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರ ಏಳಿಗೆಗಾಗಿ ಅಪಾರವಾಗಿ ಶ್ರಮಿಸಿದ್ದರು ಎಂದು ಸ್ಮರಿಸಿದರು. ಆರ್ ಧ್ರುವನಾರಾಯಣ ಅವರು ಅತ್ಯಂತ ಕ್ರಿಯಾಶೀಲ ಮತ್ತು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಸಂಸದರಾಗಿ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಬೆಳಕು ಚೆಲ್ಲಿದ್ದರು ಎಂದು ಹೇಳಿದರು. ಡಿ.ಬಿ. ಇನಾಂದಾರ್ ಅವರು ಉತ್ತರ ಕರ್ನಾಟಕದ ಪ್ರಗತಿಗಾಗಿ ಅಪಾರವಾಗಿ ಶ್ರಮಿಸಿದ್ದರು. ಉತ್ತರ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂಬುದಾಗಿ ಮರು ನಾಮಕರಣ ಮಾಡಬೇಕು ಎಂಬ ನಿಟ್ಟಿನಲ್ಲಿ ಹೋರಾಟ ಮಾಡಿದ್ದರು. ಹಾಗೆಯೇ ಅಗಲಿದ ಇತರೆ ಗಣ್ಯರ ಸೇವೆಯನ್ನು ಸ್ಮರಿಸಿ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಅಂಜನಾಮೂರ್ತಿ ಅವರು ಸಹೃದಯಿಗಳಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಅಪಾರವಾದ ಜನಪರ ಕಾಳಜಿಯೊಂದಿಗೆ ತಮಗೆ ದೊರೆತ ಅಧಿಕಾರ ಸ್ಥಾನಮಾನಗಳನ್ನು ಜನ ಸೇವೆಗಾಗಿ ಮುಡುಪಾಗಿಟ್ಟಿದ್ದರು ಎಂದರು. ಧ್ರುವನಾರಾಯಣ ಅವರು ಹೆಸರಿಗೆ ತಕ್ಕಂತೆ ಮೈಸೂರು ಭಾಗದ ದೃವತಾರೆಯಾಗಿದ್ದರು. ಸಂಸದರಾಗಿ ಸಂಸತ್ತಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಚರ್ಚಿತವಾಗುತ್ತಿದ್ದ ವಿಚಾರಗಳ ಬಗ್ಗೆ ಅಧ್ಯಯನ ನಡೆಸಿ ತಮ್ಮ ನಿಲುವನ್ನು ಮಂಡಿಸುತ್ತಿದ್ದರು. ಡಿ. ಬಿ. ಇನಾಂದಾರ್ ದೊಡ್ಡ ಮನೆತನದ ಹಿನ್ನೆಲೆಯಿಂದ ಬಂದಿದ್ದರೂ ಸರಳ, ಸಜ್ಜನಿಕೆ ವ್ಯಕ್ತಿತ್ವದಿಂದ ಎಲ್ಲರ ಮನಗೆದ್ದಿದ್ದರು. ಗಣಿಗಾರಿಕೆ ಸಚಿವರಾಗಿ ಅತ್ಯುತ್ತಮ ಸೇವೆ ಸಲ್ಲಿಸಿ, ಈ ಇಲಾಖೆಗೆ ಹೊಸ ಕಾಯಕಲ್ಪ ನೀಡಲು ಮುಂದಾಗಿದ್ದರು ಎಂದು ಗುಣಗಾನ ಮಾಡಿದರು.
ನಾಳೆ ಬೆಳಗ್ಗೆ 11ಕ್ಕೆ ಸದನ ಮುಂದೂಡಿಕೆ: ನಂತರ ಡಿಸಿಪಿ ಡಿ. ಕೆ. ಶಿವಕುಮಾರ್, ಮಾಜಿ ಸಚಿವ ಆರಗ ಜ್ಞಾನೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಶಾಸರಕಾದ ಶರತ್ ಬಚ್ಚೇಗೌಡ, ಬಿ. ಆರ್. ಪಾಟೀಲ್ ಮತ್ತಿತರರು ಮೃತರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು. ನಂತರ ಸದನದಲ್ಲಿ ಮೃತರ ಗೌರವಾರ್ಥ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿದರು. ನಂತರ ಸದನವನ್ನು ನಾಳೆ ಬೆಳಗ್ಗೆ 11ಕ್ಕೆ ಮುಂದೂಡಲಾಯಿತು.
ಇದನ್ನೂ ಓದಿ: ಸ್ಪೀಕರ್ ಯು.ಟಿ. ಖಾದರ್ ಓದಿದ ಸಂವಿಧಾನದ ಪೀಠಿಕೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ..!