ಬೆಂಗಳೂರು: ಲಾಕ್ಡೌನ್ ನಡುವೆಯೂ ತವರೂರು ಉತ್ತರ ಪ್ರದೇಶಕ್ಕೆ ನಗರದಿಂದ ತೆರಳಿದ್ದ, ಗರ್ಭಿಣಿ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.
ಸಂಗೀತಾ ಎನ್ನುವವರಿಗೆ ರೈಲಿನಲ್ಲೇ ಹೆರಿಗೆಯಾಗಿದೆ. ತಾಯಿ- ಮಗು ಸುರಕ್ಷಿತವಾಗಿದ್ದಾರೆ ಎಂದು ಫೋಟೋ ಸಮೇತ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಅವರಿಗೆ ದಂಪತಿ ಫೋಟೋ ಕಳುಹಿಸಿ, ಧನ್ಯವಾದ ಅರ್ಪಿಸಿದ್ದಾರೆ.
ವೈಟ್ ಫೀಲ್ಡ್ ಏರಿಯಾವೊಂದರಲ್ಲಿ ವಾಸವಾಗಿದ್ದ ದಂಪತಿ ಕೂಲಿ ಕೆಲಸ ಮಾಡುತ್ತಿದ್ದರು. ಸಂಗೀತಾ ಗರ್ಭಿಣಿಯಾಗಿದ್ದರಿಂದ ಊರಿಗೆ ಹೋಗಲು ಹೆಣಗಾಡುತ್ತಿದ್ದರು. ಈ ಪರಿಸ್ಥಿತಿ ಕಂಡು ಐಎಫ್ಎಸ್ ಅಧಿಕಾರಿಯೊಬ್ಬರು ಈ ಹಂತದಲ್ಲಿ ಪ್ರಯಾಣ ಬೆಳೆಸುವುದು ಒಳ್ಳೆಯದಲ್ಲ ಎಂದು ಬುದ್ಧಿ ಹೇಳಿದ್ದಾರೆ. ಆದರೂ ಊರಿಗೆ ಹೋಗಲೇಬೇಕೆಂಬ ದೃಢ ನಿರ್ಧಾರ ಮಾಡಿಕೊಂಡಿದ್ದ ದಂಪತಿ, ಡಿಸಿಪಿ ಅನುಚೇತ್ ಬಳಿ ಹೋಗಿದ್ದಾರೆ. ಮಹಿಳೆಯ ಪರಿಸ್ಥಿತಿಯನ್ನು ಕಂಡು ಸೇವಾ ಸಿಂಧು ಆ್ಯಪ್ ಮೂಲಕ ಬುಕ್ ಮಾಡಿ ರೈಲಿನಲ್ಲಿ ಇಬ್ಬರಿಗೆ ಪ್ರತ್ಯೇಕ ಆಸನ ಕಲ್ಪಿಸಿದ್ದಾರೆ.
ಮೇ 21ರಂದು ನಗರದಿಂದ ಉತ್ತರ ಪ್ರದೇಶಕ್ಕೆ ಶ್ರಮಿಕ್ ರೈಲು ಮೂಲಕ ಪ್ರಯಾಣ ಬೆಳೆಸಿದ್ದಾರೆ. ಮಾರ್ಗ ಮಧ್ಯೆ ರೈಲಿನಲ್ಲಿ ಹೆರಿಗೆಯಾಗಿ ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ಉತ್ತರ ಪ್ರದೇಶ ತಲುಪಿರುವ ದಂಪತಿ ಮಗು ಸುರಕ್ಷಿತವಾಗಿದ್ದು, ನಾವು ಕ್ಷೇಮವಾಗಿ ತಲುಪಿದ್ದೇವೆ ಎಂದು ಡಿಸಿಪಿ ಅವರಿಗೆ ಫೋಟೋ ಕಳುಹಿಸಿದ್ದಾರೆ. ಪೊಲೀಸರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.