ಬೆಂಗಳೂರು: ಹೈಕೋರ್ಟ್ ಆದೇಶದಿಂದ ಎಚ್ಚೆತ್ತುಕೊಂಡಿರುವ ಮುಷ್ಕರನಿರತ ಸಾರಿಗೆ ನೌಕರರು ಒಬ್ಬೊಬ್ಬರಾಗಿಯೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
ಕಳೆದ ದಿನಗಳಿಗೆ ಹೋಲಿಸಿದರೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ಸಂಚಾರ ಆರಂಭಿಸಿವೆ. ಮೆಜೆಸ್ಟಿಕ್ನ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಸ್ಗಳು ಆಗಮಿಸುತ್ತಿವೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ ಈ ಹಂತದಲ್ಲಿ ಸಮಂಜಸವಲ್ಲ, ಕೂಡಲೇ ಸೇವೆ ಆರಂಭಿಸಿ: ಹೈಕೋರ್ಟ್
ಸಾರಿಗೆ ನೌಕರರ ಮುಷ್ಕರ ವಾಪಸ್ ಸಂಬಂಧ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಆದರೆ, ಮುಷ್ಕರ ಅಂತ್ಯವಾಗುವ ಮುನ್ನವೇ ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಇಂದು ಸಂಜೆ ಸುದ್ದಿಗೋಷ್ಠಿ ನಡೆಸಲಿರುವ ನೌಕರ ಒಕ್ಕೂಟದ ಮುಖಂಡರು ಮುಷ್ಕರ ಅಂತ್ಯವಾಗುತ್ತೋ, ಮುಂದುವರೆಯುತ್ತೋ ಎಂಬ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಮಧ್ಯಾಹ್ನ 1 ಗಂಟೆ ತನಕ 10 ಸಾವಿರ ಬಸ್ಗಳ ಓಡಾಟ: ಇಂದು ಮಧ್ಯಾಹ್ನ 1 ಗಂಟೆ ತನಕ ನಾಲ್ಕು ನಿಗಮಗಳಿಂದ 10 ಸಾವಿರಕ್ಕೂ ಹೆಚ್ಚು ಬಸ್ಗಳು ಓಡಾಟ ನಡೆಸಿವೆ. ಕೆಎಸ್ಆರ್ಟಿಸಿಯಿಂದ 3,751, ಬಿಎಂಟಿಸಿಯಿಂದ 2,318, ಎನ್ಇಕೆಆರ್ಟಿಸಿಯಿಂದ 1,748, ಎನ್ಡಬ್ಲ್ಯುಕೆಆರ್ಟಿಸಿಯಿಂದ-2,267 ಬಸ್ಗಳ ಸೇರಿ ಒಟ್ಟು 10,084 ಬಸ್ಗಳು ರಸ್ತೆಗಿಳಿದಿವೆ.