ಬೆಂಗಳೂರು : ಸರ್ಕಾರಿ ನೌಕರನ್ನಾಗಿ ಮಾಡುವಂತೆ ಒತ್ತಾಯಿಸಿ ನಾಳೆ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಸಾರಿಗೆ ನೌಕರರು ಸಜ್ಜಾಗುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ 32 ಸಾವಿರ ನೌಕರರಿಗೆ ರಜೆ ರದ್ದು ಮಾಡಿದೆ. ಗೈರು ಹಾಜರಾಗುವ ನೌಕರರ ವೇತನ ಕಡಿತ ಜೊತೆಗೆ ವಾರದ ರಜೆ ಹೊರತುಪಡಿಸಿ ಬೇರೆಲ್ಲ ರಜೆಗಳನ್ನೂ ರದ್ದುಪಡಿಸಿ ಆದೇಶಿಸಿದೆ.
ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸರ್ಕಾರಕ್ಕಿರುವ ಸಮಸ್ಯೆ ಏನು?: ರಾಜ್ಯದಲ್ಲಿ ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸಿದರೆ ಸರ್ಕಾರಕ್ಕೆ 6500 ಕೋಟಿ ಹೊರೆಯಾಗಲಿದೆ. ರಾಜ್ಯದಲ್ಲಿ 1ಲಕ್ಷದ 26 ಸಾವಿರ ನೌಕರರು 22 ಸಾವಿರ ಬಸ್ಗಳಿವೆ. ಹೀಗಾಗಿ ಆರ್ಥಿಕ ಹೊರೆ ಕಾರಣದಿಂದ ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಹಣಕಾಸು ಇಲಾಖೆ ಹಿಂದೇಟು ಹಾಕುತ್ತಿದೆ.
ರಾಜ್ಯ ಸಾರಿಗೆ ನೌಕರರಿಗೆ ವಜಾ ಭೀತಿ ಹೆಚ್ಚಾಗಿದೆ. ತೆಲಂಗಾಣ ಸರ್ಕಾರ ಮಾದರಿಯಲ್ಲೇ ರಾಜ್ಯ ಸರ್ಕಾರ ಅನುಸರಿಸುತ್ತಾ ಅನ್ನೋ ಆತಂಕ ಶುರುವಾಗಿದೆ. ಬೇಡಿಕೆಗಳನ್ನ ಮುಂದಿಟ್ಟು ಮುಷ್ಕರ ಮಾಡಿದ್ದ 48 ಸಾವಿರ ನೌಕರರನ್ನ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ವಜಾ ಮಾಡಿದ್ದರು. ಬಸ್ ಸಂಚಾರ ಸ್ತಬ್ಧ ಮಾಡಿದರೆ ನಮ್ಮನ್ನೂ ಅದೇ ರೀತಿ ಮಾಡ್ತಾರೆ ಅನ್ನೋ ಭೀತಿಯಲ್ಲಿ ರಾಜ್ಯ ಸಾರಿಗೆ ನೌಕರರಿದ್ದಾರೆ. ಕೇವಲ ಸಿಐಟಿಯು ನೌಕರರು ಮಾತ್ರ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಲಿದ್ದಾರೆ. ಹಾಗಾಗಿ ಎಐಡಿಯುಸಿ ನೌಕರರು ಉಪವಾಸ ಸತ್ಯಾಗ್ರಹ ನಡೆಸಲು ಹಿಂದೇಟು ಹಾಕುತ್ತಿದ್ದಾರೆ.
ಸರ್ಕಾರಿ ನೌಕರರನ್ನಾಗಿ ಪರಿಗಣಿಸಿದರೆ ಸಿಗುವ ಲಾಭವೇನು?: ಸರ್ಕಾರಿ ನೌಕರರನ್ನಾಗಿ ಮಾಡಿದರೆ ವೇತನ ಆಯೋಗದ ಶಿಫಾರಸ್ಸಿನಂತೆ ಸಂಬಳ ಸಿಗಲಿದೆ. ನೌಕರರಿಗೆ ಭವಿಷ್ಯನಿಧಿ,ವಿಮಾ ಹಣ,ಗ್ರಾಚ್ಯುಟಿ ಸೌಲಭ್ಯ,ಮರಣ ನಿಧಿ ಸೌಲಭ್ಯ ವೈದ್ಯಕೀಯ ಸೌಲಭ್ಯಗಳು ಸಿಗಲಿವೆ. ಈ ಹಿನ್ನೆಲೆ ಸಾರಿಗೆ ನೌಕರರು ತಮ್ಮನ್ನೂ ಕೂಡ ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂದು ಹೋರಾಟಕ್ಕೆ ಮುಂದಾಗಿದ್ದಾರೆ.